ಅಥಣಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಕುರಿತು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕೋಡಿ, ಅಥಣಿ, ನಿಪ್ಪಾಣಿ, ಕಾಗವಾಡ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ಹದಿನೆಂಟು ವರ್ಷದ ಹಿಂದೆ ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿರುವ ಕಾರಣ ಮಹಾರಾಷ್ಟ್ರ ಗಡಿ ಹೊಂದಿರುವ ಕರ್ನಾಟಕ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಗಡಿ ಚೆಕ್ ಪೊಸ್ಟ್‌ನಲ್ಲಿ ಡಿಆರ್ ಹಾಗೂ ಕೆಎಸ್‌ಆರ್‌ಪಿ ನಿಯೋಜನೆ ಮಾಡಲಾಗಿದೆ. ನಿಪ್ಪಾಣಿ ಕಗನೋಳಿ ಬಳಿ ಸಹ ಕೆಎಸ್ಆರ್‌ಪಿ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ತರ್ಲೆ ಮಾಡಿದ್ರೆ ಕಠಿಣ ಕ್ರಮ: ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್
ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ 21 ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ನಿಪ್ಪಾಣಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉಭಯ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನು ಎಂದಿನಂತೆ ಕರ್ನಾಟಕ, ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಆರಂಭಿಸಲಾಗಿದೆ.
ಇದನ್ನೂ ಓದಿ: ನಿಪ್ಪಾಣಿಯಲ್ಲಿ ಉಭಯ ರಾಜ್ಯಗಳ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ