ಬೆಂಗಳೂರು: ಸಿಡಿಎಸ್ನ ಬಿಪಿನ್ ರಾವತ್ ನಿಧನದ ಬಗ್ಗೆ ತನಿಖೆ ಆಗಬೇಕು. ಇಲ್ಲದಿದ್ದರೆ ಪ್ರಪಂಚದಲ್ಲಿ ಅಸಮಾಧಾನ ಹಾಗೆಯೇ ಉಳಿಯುತ್ತದೆ. ಸುಪ್ರೀಂಕೋರ್ಟ್ ನಿಗಾದಡಿ ತನಿಖೆ ನಡೆದರೆ ಸೂಕ್ತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, ರಾವತ್ ನಿಧನದ ಬಗ್ಗೆ ಕೆಲವರು ವಿಕೃತ ಟ್ವೀಟ್ಗಳನ್ನು ಮಾಡಿದ್ದಾರೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳು ಖಂಡನೆ ಮಾಡಿದ್ದಾರೆ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ರಾವತ್ ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಹೆಲಿಕಾಪ್ಟರ್ ಅಪಘಾತದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಗಾದಲ್ಲಿ ತನಿಖೆ ಮಾಡಿದರೆ ಸೂಕ್ತ. ಆದಷ್ಟು ಬೇಗ ಆಗಬೇಕು. ದುಷ್ಟ ಶಕ್ತಿ ಇದರ ಹಿಂದೆ ಇದ್ದರೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು.. ಇಬ್ಬರು ಭಯೋತ್ಪಾದಕರ ಹುಟ್ಟಡಗಿಸಿದ ಭದ್ರತಾ ಪಡೆಗಳು
ಬಿಪಿನ್ ರಾವತ್ ಭಾರತದ ಬಾಹುಬಲಿ. ರಾವತ್ ಹೆಸರು ಕೇಳುತ್ತಿದ್ದಂತೆ ಶತ್ರುಗಳ ಎದೆ ನಡುಗುತ್ತಿತ್ತು. ರಕ್ಷಣಾ ವ್ಯವಸ್ಥೆ ಈ ಮಹಾನ್ ವ್ಯಕ್ತಿಯ ಕೈಯಲ್ಲಿತ್ತು, ದೊಡ್ಡ ಚಾಣಕ್ಯರಾಗಿದ್ದ ರಾವತ್ ಅವರ ಸಾವು ದೊಡ್ಡ ದುರಂತ ಎಂದರು.
ಬಿಪಿನ್ ರಾವತ್ ಮಾತು ತೀಕ್ಷ್ಣವಾಗಿತ್ತು, ತಪ್ಪು ಮಾಡಿದರೆ ನೇರ ಛೀಮಾರಿ ಹಾಕುತ್ತಿದ್ದರು. ಸರ್ಜಿಕಲ್ ಸ್ಟ್ರೈಕ್ ರುವಾರಿಯಾಗಿದ್ದರು ಎಂದು ಬಣ್ಣಿಸಿದರು.
ಇನ್ನು ವಿಧಾನಸಭೆಯ ಜೆಡಿಎಸ್ನ ಉಪನಾಯಕ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಅವರ ಗುಣಗಾನ ಮಾಡಿದರು.