ಬೆಳಗಾವಿ : ಆರೋಗ್ಯ ಮತ್ತು ಕುಟುಂಬ ಕಡೆಗಣಿಸಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವಧನ ಮತ್ತು ಆರೋಗ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದರು.
ಶಾಸಕಿಯನ್ನು ಭೇಟಿ ಮಾಡಿದ ಆಶಾ ಕಾರ್ಯಕರ್ತೆಯರು, ಮಹಾಮಾರಿ ಕೊರೊನಾ ವಿರುದ್ಧ ಪ್ರಾಣವನ್ನೇ ಲೆಕ್ಕಿಸದೆ ಆರೋಗ್ಯ ಮತ್ತು ಕುಟುಂಬವನ್ನು ತೊರೆದು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಮಾತ್ರ ನಮ್ಮನ್ನು ಲೆಕ್ಕಿಸದೆ ಇರುವುದು ನೋವಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಒದಗಿಸಿಕೊಡಬೇಕೆಂದು ತಾಲೂಕಿನ ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡರು.
ಅವರ ನೋವಿಗೆ ಸ್ಪಂದಿಸಿದ ಹೆಬ್ಬಾಳ್ಕರ್, ಕೊರೊನಾ ನಿಯಂತ್ರಣದಲ್ಲಿ ನಿಮ್ಮ ಸೇವೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಅಂತಹ ಶ್ಲಾಘನೀಯವಾದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ನಿಮಗೆ ಸರ್ಕಾರದಿಂದ ಉತ್ತಮ ಗೌರವಧನ ಹಾಗೂ ಆರೋಗ್ಯ ರಕ್ಷಣಾ ಸಾಮಗ್ರಿಗಳು ಸಿಗಲು ನಾನು ಶ್ರಮಪಡುತ್ತೇನೆ. ನಿಮ್ಮ ಬೆಂಬಲಕ್ಕೆ ಸದಾ ಬೆಂಬಲವಾಗಿ ಇರುತ್ತೇನೆ ಎಂದು ಭರವಸೆ ನೀಡಿದರು.