ಬೆಳಗಾವಿ: ಇಂದು ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕುರುಳಿ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಘಟನೆ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ನಡೆದಿದೆ. ವೀರಭದ್ರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ನಿರ್ಮಿಸಿದ್ದ ತಗಡಿನ ಶೆಡ್ ಕೂಡ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಗಾವಿ ನಗರ ಸೇರಿ ಜಿಲ್ಲೆ ವಿವಿಧೆಡೆ ಬೆಳಗ್ಗೆಯಿಂದ ತುಂತುರು ಮಳೆ ಸುರಿಯುತ್ತಿದೆ. ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ.
ಹುಬ್ಬಳ್ಳಿಯಲ್ಲಿ ಅವಾಂತರ ಸೃಷ್ಟಿಸಿರುವ ಮಳೆ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೊನ್ನೆಯಿಂದ ಅಕಾಲಿಕ ಧಾರಾಕಾರ ಮಳೆ ಬಿಡದೇ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸುರಿದ ಮೊದಲ ಮಳೆಯ ಅಬ್ಬರಕ್ಕೆ ಅವಳಿ ನಗರ ತತ್ತರಿಸಿ ಹೋಗಿದೆ. ನಿನ್ನೆ ಕೂಡ ಮಳೆರಾಯ ನಗರದಲ್ಲಿ ಅಬ್ಬರಿಸಿದ್ದು, ದಾಜೀಬಾನಪೇಟೆ ತುಳಜಾಭವಾನಿ ದೇವಸ್ಥಾನ ರಸ್ತೆ ನದಿಯಂತೆ ಮಾರ್ಪಾಡಾಗಿತ್ತು. ಕೊಳಚೆ ನೀರು ರಸ್ತೆ ಮಧ್ಯೆ ಮೊಣಕಾಲುದ್ದ ಹರಿಯುವ ದೃಶ್ಯ ಕಂಡು ಬಂದಿದೆ. ಜೊತೆಗೆ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ಗಳು ನೀರಿನ ರಭಸಕ್ಕೆ ತೇಲಿ ಹೋಗಿವೆ.
ಕೇಶ್ವಾಪೂರದಲ್ಲಿ ವರುಣನ ಅಬ್ಬರಕ್ಕೆ ರಸ್ತೆಗೆ ಮರವೊಂದು ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸುರಿದ ಭಾರಿ ಮಳೆಗೆ ಕಾಟನ್ ಮಾರ್ಕೆಟ್ ಕರ್ನಾಟಕ ಬ್ಯಾಂಕ್ ಹತ್ತಿರ ಚರಂಡಿ ನೀರು ಹಲವಾರು ಮಳಿಗೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ನವನಗರದ ಭಾಗದಲ್ಲಿ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಈ ಅಕಾಲಿಕ ಮಳೆಯಿಂದ ಜನಜೀವನ ಹಾಗೂ ಸಂಚಾರದಲ್ಲಿ ಭಾರಿ ಸಮಸ್ಯೆ ಉಂಟಾಗಿದೆ.
ಇದನ್ನೂ ಓದಿ: ಸಾಕಷ್ಟು ಮನವಿ ಕೊಟ್ಟರೂ ಸಿಗದ ಸ್ಪಂದನೆ: ಮತದಾನ ಬಹಿಷ್ಕರಿಸಿ ಸೇತುವೆ ಕಟ್ಟಿದ ಗ್ರಾಮಸ್ಥರು