ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧ್ ಸಾಗರ ಜಲಪಾತ ಭೋರ್ಗರೆಯುತ್ತಿದೆ. ಈ ಹಿನ್ನೆಲೆ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಇದನ್ನು ಗಮನಿಸದ ಚಾಲಕ ರೈಲು ಚಲಾಯಿಸಿದ್ದಾನೆ.
ಇದರಿಂದಾಗಿ, ಮಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು ನಿಂತಲ್ಲೇ ನಿಂತಿದೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ. ಗೋವಾ ಗಡಿಯಲ್ಲಿ ವಿಪರೀತ ಮಳೆಯಿಂದ ರೈಲಿಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಅಪ್ಪಳಿಸುತ್ತಿದೆ. ರುದ್ರ ರಮಣೀಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ದೂಧ್ ಸಾಗರ ಭೋರ್ಗರೆತಕ್ಕೆ ಕರ್ನಾಟಕ - ಗೋವಾ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಮಳೆ ಕಡಿಮೆಯಾಗುವವರೆಗೆ ರೈಲು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ದೂಧ್ ಸಾಗರದ ನಯನ ಮನೋಹರ ದೃಶ್ಯವನ್ನು ಪ್ರಯಾಣಿಕರು ರೈಲಲ್ಲೇ ಕುಳಿತು ಕಣ್ತುಂಬಿಕೊಂಡರು.
ಮೈದುಂಬಿ ಹರಿಯುತ್ತಿರುವ ಗೋಕಾಕ್ ಫಾಲ್ಸ್
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವರ್ಷಧಾರೆ ಮುಂದವರೆದಿದ್ದು, ಗೋಕಾಕ್ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಕೃಷ್ಣ ನದಿಯ ಉಪ ನದಿಯಾಗಿರುವ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆ ಗೋಕಾಕ್ ಫಾಲ್ಸ್ ಹಾಲಿನ ನೊರೆಯಂತೆ ಮೈದುಂಬಿ ಹರಿಯುತ್ತಿದೆ. ಭಾರತದ ನಯಾಗರ ಜಲಪಾತ ಎಂದೇ ಪ್ರಸಿದ್ಧಿಯಾಗಿರುವ ಈ ಫಾಲ್ಸ್ ನೋಡಲು ಕಂಗಳೆರೆಡು ಸಾಲುತ್ತಿಲ್ಲ.
ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಗೋಕಾಕ್, ಮೂಡಲಗಿ, ಅರಭಾವಿ ಸೇರಿದಂತೆ ಇತರ ನೂರಾರು ಗ್ರಾಮಗಳಿಗೆ ಪ್ರವಾಹ ಭೀತಿ ಸೃಷ್ಟಿಸಿದೆ. ಆದರೂ, ಜಲಪಾತದ ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.