ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಖಾನಾಪುರ ತಾಲೂಕಿನ ಹತ್ತಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ.
ಭಾರಿ ಮಳೆಯ ಕಾರಣ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಖಾನಾಪುರದ ಪಾರಿಶ್ವಾಡ, ಹಿರೇಮುನವಳ್ಳಿ, ಚಾಪಗಾಂವ, ಕಾಮಸಿನಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆಗಳು ಮುಳುಗಡೆ ಆಗಿವೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತದ ಸೂಚನೆ ನೀಡಿದೆ.
ಬೈಲಹೊಂಗಲ ತಾಲೂಕಿನ ಇನಾಮಹೊಂಗಲ ಬಳಿಯೂ ರಸ್ತೆ ಮುಳುಗಡೆ ಆಗಿದೆ. ಹೀಗಾಗಿ ಇನಾಮಹೊಂಗಲ-ಸವದತ್ತಿ ಸಂಚಾರ ಸ್ಥಗಿತಗೊಂಡಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಇರುವ ನವಿಲು ತೀರ್ಥ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಮುನವಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಕೆಳ ಹಂತದ ಸೇತುವೆ ಮುಳುಗಡೆಗೊಂಡಿದೆ. ಹೀಗಾಗಿ ಸವದತ್ತಿ ಮುನವಳ್ಳಿ ಸಂಚಾರ ಸ್ಥಗಿತಗೊಂಡಿದೆ.