ಬೆಳಗಾವಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭಾ ನದಿಗೆ ನೀರಿನ ಹೊರಹರಿವು ಹೆಚ್ಚಾಗಿದೆ. ಪರಿಣಾಮ, ರಾಮದುರ್ಗಕ್ಕೆ ಜಲಕಂಟಕದ ಆತಂಕ ಶುರುವಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯಿಂದ ಮಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನವಿಲುತೀರ್ಥ ಡ್ಯಾಮ್ನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದ ರಾಮದುರ್ಗ ತಾಲೂಕು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗುವ ಭೀತಿ ಎದುರಿಸುತ್ತಿವೆ. ಇದಲ್ಲದೇ ಮಳೆಯ ಪ್ರಮಾಣ ಹೀಗೆ ಮುಂದುವರಿದರೆ ರಾಮದುರ್ಗ ಅಷ್ಟೇ ಅಲ್ಲದೇ ಬಾಗಲಕೋಟೆ, ಬಾದಾಮಿ ಸೇರಿದಂತೆ ಮಲಪ್ರಭಾ ಜಲಾನಯನ ಪ್ರದೇಶಗಳು ಪ್ರವಾಹದ ಹೊಡೆತಕ್ಕೆ ನಲುಗಲಿವೆ ಎನ್ನಲಾಗಿದೆ.
ಈಗಾಗಲೇ ಮಲಪ್ರಭೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಹೊರಹರಿವು ಹೆಚ್ಚಿಸಲಾಗಿದೆ. ಹೀಗಾಗಿ ರಾಮದುರ್ಗ ತಾಲೂಕಿನ ಸಂಗಮೇಶ್ವರ ನಗರ, ಕಿಲ್ಲಾ ತೋರಗಲ್, ಸುನ್ನಾಳ, ತೂರನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಬೆಳೆದ ಕಬ್ಬು, ಗೋವಿನಜೋಳ, ಭತ್ತ ಸೇರಿದಂತೆ ಇತರ ಬೆಳೆಗೆಳೆಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಮಲಪ್ರಭೆ ಹೊಡೆತಕ್ಕೆ ನಲುಗಿದ ಮಲಪ್ರಭಾ ಜಲಾನಯನ ಪ್ರದೇಶದ ರೈತರು, ಜನರು ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ. ಜಿಲ್ಲೆ ಸೇರಿ ಖಾನಾಪೂರ ತಾಲೂಕಿನಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಾದ್ರೆ, ಇಡೀ ರಾಮದುರ್ಗ ತಾಲೂಕು ಸೇರಿದಂತೆ ಕೆಲವು ಹಳ್ಳಿಗಳು ಮುಳುಗಡೆಯಾಗಲಿವೆ. ಹೀಗಾಗಿ ಜಿಲ್ಲಾಡಳಿತ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುವುದು ಸಂತ್ರಸ್ತರ ಒತ್ತಾಸೆ.