ಅಥಣಿ: ತಾಲೂಕಿನಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಯಲ್ಲಮವಾಡಿ ಕೆರೆ ಎಂಟು ವರ್ಷ ಬಳಿಕ ತುಂಬಿ ಹರಿಯುತ್ತಿದ್ದು, ಯಲ್ಲಮ್ಮನ ದೇವಸ್ಥಾನ ಜಲಾವೃತ ವಾಗಿದೆ. ಪರಿಣಾಮ ದೇವಿಯ ದರ್ಶನಕ್ಕೆ ಸಾಧ್ಯವಾಗುತ್ತಿಲ್ಲ. ನೆರೆಯ ಮಹಾರಾಷ್ಟ್ರದಿಂದ ಸಾವಿರಾರು ಜನರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದು, ಮಳೆಯ ಕಾರಣ ದೇವಸ್ಥಾನದ ಬಾಗಿಲು ಮುಚ್ಚಿದೆ. ಜನರು ದೂರದಿಂದಲೇ ನಮಸ್ಕಾರ ಮಾಡುವ ಸ್ಥಿತಿ ಎದುರಾಗಿದೆ. ಭಾರೀ ಮಳೆಯ ಹಿನ್ನೆಲೆ ಎರಡು ದಿನಗಳಿಂದ ಯಾವುದೇ ಪೂಜಾ ಕೈಂಕೈರ್ಯಗಳು ನಡೆದಿಲ್ಲ.
ಇನ್ನು, ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಪೂಜಾ ಸಾಮಗ್ರಿಗಳ ಅಂಗಡಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಸದ್ಯ ನೀರಿನ ಮಟ್ಟ ಕಡಿಮೆಯಾಗದೇ ಇರುವುದರಿಂದ ದೇವಿಯ ದರ್ಶನಕ್ಕೆ ಇನ್ನೂ ಎರಡು- ಮೂರು ದಿನ ಕಾಯಬೇಕು ಎಂದು ದೇವಸ್ಥಾನದ ಅರ್ಚಕ ರಾಹುಲ್ ಪೂಜಾರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.