ಬೆಂಗಳೂರು: ''ಎಲ್ಲ ಐಎಲ್ಐ ಹಾಗೂ ಸಾರಿ ಪ್ರಕರಣಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲು ಸೂಚಿಸಲಾಗಿದೆ'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕೋವಿಡ್ ಕುರಿತಂತೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಪಾಸಿಟಿವಿಟಿ ದರ ಶೇ.3.82: ''ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಟೆಸ್ಟ್ಗಳನ್ನು ಮಾಡಲಾಗುತ್ತಿದೆ. ಕೋವಿಡ್ ಪಾಸಿಟಿವಿಟಿ ದರ ಶೇಕಡಾ 3.82 ರಷ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಇನ್ನೂ ಇಳಿಮುಖಗೊಂಡಿಲ್ಲ. ಆದರೆ, ಕೇರಳ ರಾಜ್ಯದಲ್ಲಿ ಈಗಾಗಲೇ ಕೋವಿಡ್ನಲ್ಲಿ ಇಳಿಕೆಯ ಟ್ರೆಂಡ್ ಆರಂಭವಾಗಿದೆ. ಹೀಗಾಗಿ ಕೋವಿಡ್ ಪಾಸಿಟಿವ್ ಹೊಂದಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ'' ಎಂದರು.
''ವಿಶೇಷವಾಗಿ ವಯಸ್ಕರಲ್ಲಿ ಐಎಲ್ಐ ಹಾಗೂ ಸಾರಿ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಲು ಸೂಚಿಸಲಾಗಿದೆ. ಈ ಮೊದಲು 20 ಪ್ರಕರಣಗಳ ಪೈಕಿ ಒಂದು ಮಾತ್ರ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗುತ್ತಿತ್ತು. ಇನ್ಮುಂದೆ ಎಲ್ಲ ಐಎಲ್ಐ ಇರೋರಿಗೆ ಕೋವಿಡ್ ಟೆಸ್ಟ್ ನಡೆಸುವಂತೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ'' ಎಂದು ಹೇಳಿದರು.
ಕೊರೋನಾ ಹೆಲ್ಪ್‌ಲೈನ್: ''ರೋಗ ಲಕ್ಷಣಗಳು ಇರುವವರ ಮೇಲೆ ನಿಗಾ ವಹಿಸಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಮನೆಯಲ್ಲಿ ಐಸೊಲೇಷನ್ ಆಗಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಹೇಳಲಾಗಿದೆ. ಕರ್ನಾಟಕದಲ್ಲಿ ಮುಂದಿನ ವಾರದಲ್ಲಿ ಕೋವಿಡ್ ಇಳಿಕೆಯ ಟ್ರೆಂಡ್ ಶುರುವಾಗಬಹುದು ಎಂದು ನೀರಿಕ್ಷಿಸಲಾಗಿದೆ. ನಿನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಳೆ ಕೊರೋನಾ ಹೆಲ್ಪ್ ಲೈನ್ ಲೋಕಾರ್ಪಣೆ ಮಾಡಲಾಗುವುದು'' ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಡಿನ್ನರ್ ವಿಚಾರ: ''ಸತೀಶ್ ಜಾರಕಿಹೊಳಿ ಅವರು ಡಿನ್ನರ್ಗೆ ಕರೆದಿದ್ದು ನಿಜ. ನಾವೆಲ್ಲ ಭಾಗವಹಿಸಿದ್ದೆವು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದಿದ್ದು, ಒಂದು ಫ್ರೆಂಡ್ಲಿ ಡಿನ್ನರ್ ಅಷ್ಟೇ. ಯಾವುದೇ ಅಜೇಂಡಾ ಇರಲಿಲ್ಲ. ಲೋಕಸಭೆ ಚುನಾವಣೆ ವಿಚಾರದಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಈಗ ನಮ್ಮ ಮುಂದಿರುವ ಮುಖ್ಯ ಗುರಿ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನವರಿ 10ಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಭೇಟೆ: ''ಇದೇ ಜನವರಿ 10ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಲೋಕಸಭೆ ಚುನಾವಣಾ ತಯಾರಿ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರನ್ನು ಆಯ್ಕೆ ಮಾಡಿ ಕಳಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಳು ಪಕ್ಷದೊಳಗೆ ನಡೆಯುತ್ತಿದೆ. ಸಮುದಾಯವಾರು ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸದ್ಯಕ್ಕೆ ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಪಕ್ಷದ ನಾಯಕರ ಗಮನವಿದೆ'' ಎಂದರು.
ಜೆಎನ್1 ಪ್ರಕರಣಗಳ ಹೆಚ್ಚಳ, ಕೋವಿಡ್ ಲಸಿಕೆಗಳ ಸಂಗ್ರಹಕ್ಕೆ ಮುಂದಾದ ಪಾಲಿಕೆ: ಬೆಂಗಳೂರು ನಗರದಲ್ಲಿ ಕೋವಿಡ್ ರೂಪಾಂತರ ತಳಿ ಜೆಎನ್1 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಲಸಿಕೆಗಳ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ. ಈ ಕುರಿತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ''ರಾಜ್ಯದಲ್ಲಿ ಮತ್ತೆ ಕರೋನಾ ಸೋಂಕು ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ'' ಎಂದು ಹೆಳಿದರು.
''ಆರೋಗ್ಯ ಇಲಾಖೆ ಸೂಚನೆಯಂತೆ ಲಸಿಕೆಗಳ ಸಂಗ್ರಹಣಾ ಕಾರ್ಯವು ನಡೆಯುತ್ತಿದ್ದು, ಯಾವ್ಯಾವ ವಲಯಗಳಿಗೆ ಎಷ್ಟೆಷ್ಟು ಲಸಿಕೆಗಳ ಅಗತ್ಯವಿದೆ ಎನ್ನುವ ಬಗ್ಗೆ ನಿರ್ಧರಿಸಲಾಗುತ್ತಿದೆ. ನಂತರ ಎಲ್ಲೆಲ್ಲಿ ಅಗತ್ಯವಿದೆಯೋ ಆ ಕೇಂದ್ರಗಳಿಗೆ ಲಸಿಕೆ ವಿತರಣೆ ಮಾಡಲಾಗುವುದು. ಸಾರ್ವಜನಿಕ ಆರೋಗ್ಯದತ್ತ ಗಮನಹರಿಸುವುದು ಮುಖ್ಯವಾಗಿದ್ದು, ಆದಷ್ಟು ಸಾರ್ವಜನಿಕವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ರೋಗ ನಿವಾರಣೆಗೆ ಸಹಕರಿಸಬೇಕು'' ಎಂದು ಸಲಹೆ ನೀಡಿದರು.
ಗಣರಾಜ್ಯೋತ್ಸವದ ಸಿದ್ಧತೆ: ''ಗಣರಾಜ್ಯೋತ್ಸವದ ಸಿದ್ಧತೆಯ ಕುರಿತು ಸಭೆ ನಡೆಸಲಾಗಿದ್ದು, ಬೆಂಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಮೈದಾನದ ಮೂರೂ ಗೇಟ್‌ಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತದೆ. ಇದರ ಹೊರತಾಗಿ ಯಾವೆಲ್ಲಾ ಸಿದ್ಧತೆಗಳ ಅಗತ್ಯವಿದೆ ಎನ್ನುವ ಬಗೆ ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ತುಷಾರ್ ಗಿರಿನಾಥ್ ವಿವರಿಸಿದರು.
ಇದನ್ನೂ ಓದಿ: ರೈತರಿಗೆ ಬೆಳೆಹಾನಿ ಪರಿಹಾರ: ₹105 ಕೋಟಿ ಬಿಡುಗಡೆಗೊಳಿಸಿ ಸರ್ಕಾರ ಆದೇಶ