ಬೆಳಗಾವಿ : ಚೀನಾ ದೇಶದಿಂದ ಬಂದಿರುವ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದ್ರೂ ರಾಜ್ಯದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಒಂದು ವೇಳೆ ಈ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡಿದರೆ, ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್, ಆಕ್ಸಿಜನ್, ಮಾಸ್ಕ್, ಪಿಪಿಇ ಕಿಟ್ ಸೇರಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೇಂದ್ರ ಸರ್ಕಾರದಿಂದ ಸದ್ಯ ಯಾವುದೇ ಮಾರ್ಗಸೂಚಿ ಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಯಾವುದೇ ಸೂಚನೆ ಬಂದಿಲ್ಲ. ಆದರೂ ಸರ್ಕಾರ ಎಚ್ಚರಿಕೆ ವಹಿಸಿದೆ ಎಂದರು.
ದೇಶದ ಸಂಪತ್ತು ಹಂಚುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆಯಿದ್ದು, ಸಮಾಜದಲ್ಲಿರುವ ದುರ್ಬಲ, ಶೋಷಿತ ವರ್ಗ ಸೇರಿ ಎಲ್ಲ ಜನರಿಗೂ ಸಹಾಯ ಮಾಡಬೇಕು. ಅವರನ್ನು ಮೇಲೆ ತರುವುದು ಕಾಂಗ್ರೆಸ್ ಸಿದ್ಧಾಂತ. ಇದರಲ್ಲಿ ಯಾರೂ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಎಂದು ಹೇಳಿದಾಗ ಯಾರಿಗೆ ಅವಶ್ಯಕತೆಯಿದೆಯೋ ಅವರಿಗೆ ಹೆಚ್ಚು ನೆರವು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸಂವಿಧಾನ ಕೂಡ ಅದನ್ನೇ ಹೇಳುತ್ತದೆ ಎಂದು ಗುಂಡೂರಾವ್ ತಿಳಿಸಿದರು.
ಚೀನಾ ನ್ಯುಮೋನಿಯಾ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ (ಬೆಂಗಳೂರು) : ಚೀನಾ ನ್ಯುಮೋನಿಯಾ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ನವೆಂಬರ್ 29-2023) ಇತ್ತೀಚೆಗೆ ತಿಳಿಸಿದ್ದರು. ವಿಕಾಸಸೌಧದಲ್ಲಿ ಅಂದು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಚೀನಾ ನ್ಯುಮೋನಿಯಾ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಇದುವರೆಗೆ ಚೀನಾ ನ್ಯುಮೋನಿಯಾಗೆ ಸಂಬಂಧಿಸಿದ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಸಿ ಜಾಗೃತಿ ಮೂಡಿಸಬೇಕು ಎಂಬುದೂ ಸೇರಿದಂತೆ ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಕೆ ಮಾಡಲು ಆದ್ಯತೆ ನೀಡುವಂತೆ ಹೇಳಲಾಗಿದೆ ಎಂದಿದ್ದರು.
ಇದನ್ನೂ ಓದಿ: ಚೈನಾ ನ್ಯುಮೋನಿಯಾ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ: ಸಚಿವ ದಿನೇಶ್ ಗುಂಡೂರಾವ್