ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ವಸ್ತುವನ್ನು ಇಲ್ಲಿಗೆ ಯಾರು ತಂದವರು, ಯಾವ ಕಾರಣಕ್ಕೆ ಇಲ್ಲಿ ಇಟ್ಟಿದ್ದರು ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು ಮೆಜೆಸ್ಟಿಕ್ ಸುತ್ತ-ಮುತ್ತ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ನಿರಂತರ ತಪಾಸಣಾ ಕಾರ್ಯ ನಡೆಯುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಈ ವಸ್ತುವನ್ನು ಯಾರು ಯಾವ ಕಾರಣಕ್ಕಾಗಿ ನಿಲ್ದಾಣದೊಳಗೆ ತಂದಿದ್ದರೆಂಬುದು ಗೊತ್ತಾಗಿಲ್ಲ. ರೈಲಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಸಂದರ್ಭದಲ್ಲಿ ಬಿದ್ದಿರಬಹುದೇ? ಅಥವಾ ಯಾರಾದರೂ ರೈಲು ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಂದಿಟ್ಟಿದ್ದರೇ? ಇಲ್ಲವೇ ಪೊಲೀಸ್ ಭದ್ರತೆಯನ್ನು ಪರಿಶೀಲಿಸುವುದಕ್ಕಾಗಿ ಇಟ್ಟಿದ್ದರೇ? ಎಂಬಿತ್ಯಾದಿ ಬಗ್ಗೆ ತನಿಖಾ ತಂಡಗಳು ತನಿಖೆ ನಡೆಸುತ್ತಿವೆ. ಗ್ರೆನೇಡ್ನಿಷ್ಕ್ರಿಯಗೊಳಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.