ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ 10 ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ಗಣೇಶೋತ್ಸವಕ್ಕೆ ತೆರೆ ಬಿದ್ದಿದೆ. ಗುರುವಾರ ಸಾರ್ವಜನಿಕ ಗಣೇಶ ಮಂಡಳಿಗಳ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಹುತಾತ್ಮ ಚೌಕ್ನಲ್ಲಿ ಮೆರವಣಿಗೆಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಗಣೇಶನಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸಿ ಚಾಲನೆ ನೀಡಿದರು. ಇದೇ ವೇಳೆ ಗಣೇಶ ಇರುವ ಟ್ರ್ಯಾಕ್ಟರ್ ಚಾಲನೆ ಮಾಡಿ ಅಭಯ ಪಾಟೀಲ್ ಎಲ್ಲರ ಗಮನ ಸೆಳೆದರು. ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು, ಮಂಡಳಿಯವರು ಭಾಗವಹಿಸಿದ್ದರು.
ಅದ್ಧೂರಿ ಗಣೇಶೋತ್ಸವ: ಈ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ ಮತ್ತು ಆಸೀಫ್ ಸೇಠ್, ಬೆಳಗಾವಿಯಲ್ಲಿ ಇಡೀ ದೇಶದಲ್ಲೇ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತದೆ. ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಜನ ಮೆರವಣಿಗೆ ವೀಕ್ಷಿಸಲು ಆಗಮಿಸುತ್ತಾರೆ. ಎಲ್ಲರೂ ಶಾಂತಿಯಿಂದ ವರ್ತಿಸಿ, ಮೆರವಣಿಗೆಯ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಕಿರ್ಲೋಸ್ಕರ್ ರಸ್ತೆಯಿಂದ ಆರಂಭವಾದ ಮೆರವಣಿಗೆ ಮಾರುತಿ ಗಲ್ಲಿ, ಸಮಾದೇವಿ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತ, ಶನಿ ಮಂದಿರ ಮಾರ್ಗವಾಗಿ ಕಪಿಲೇಶ್ವರ ಮಂದಿರದ ಹೊಂಡದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಜರುಗಲಿದೆ.
ನಗರದಲ್ಲಿ 378 ಸಾರ್ವಜನಿಕ ಗಣೇಶ ಮಂಡಳಿಗಳು ಇದ್ದು, ಗುರುವಾರ ಸಂಜೆ ಶುರುವಾದ ಗಣೇಶ ಮೂರ್ತಿಗಳ ನಿಮಜ್ಜನ ಬೆಳಗಿನ ಜಾವದವರೆಗೂ ನಡೆಯಲಿದೆ.
8 ಕಡೆ ನಿಮಜ್ಜನ: ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡ ಸೇರಿ 8 ಕಡೆಗಳಲ್ಲಿ ನಿಮಜ್ಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಅದ್ಧೂರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮೆರವಣಿಗೆಯುದ್ದಕ್ಕೂ ರೂಪಕಗಳು, ಜಾನಪದ ಕಲಾತಂಡಗಳು ಎಲ್ಲರನ್ನೂ ಆಕರ್ಷಿಸಲಿವೆ. ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಇಂದು ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ: ಪಥ ಸಂಚಲನ ನಡೆಸಿದ ಪೊಲೀಸರು