ಚಿಕ್ಕೋಡಿ: ರಾಜ್ಯ ಸರ್ಕಾರ ಕನ್ನಡ ಭಾಷೆ ಉಳಿವಿಗಾಗಿ ಹಾಗೂ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇತ್ತ ಜಿಲ್ಲಾ ಮುಂಚೂಣಿಯಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಜಿಲ್ಲಾಡಳಿತದಿಂದ ಅಳವಡಿಸಲಾದ ಕನ್ನಡ ಜಾಹೀರಾತು ನಾಮಫಲಕದಲ್ಲಿ ತಪ್ಪು ಕಂಡು ಬಂದಿದ್ದು, ಹಲವು ಸ್ಥಳೀಯ ಕನ್ನಡ ಸಾಹಿತಿಗಳ ಹಾಗೂ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜಯಂತಿ ಪ್ರಯುಕ್ತ ಜನರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಕಲ್ಪಿಸುವ ಸದುದ್ದೇಶದಿಂದ ಅಳವಡಿಸಲಾದ ಕರ್ನಾಟಕ ಸರ್ಕಾರದ ನಾಮಫಲಕದಲ್ಲಿ ಆಂದೋಲನ ಎಂದು ಮುದ್ರಿತವಾಗಬೇಕಾದ ಪದವು ಆದೋಲನ ಎಂದು ತಪ್ಪು ಮುದ್ರಣವಾಗಿದೆ.
ಕಳೆದ ಹಲವು ದಿನಗಳಿಂದ ಈ ಬ್ಯಾನರ್ ಕಚೇರಿ ಎದುರು ರಾರಾಜಿಸುತ್ತಿದ್ದು, ಯೋಜನಾ ಮಾಹಿತಿ ಪಡೆಯಲು ಜಾಹೀರಾತು ಫಲಕದ ಮೇಲೆ ಒಂದು ಸಹಾಯವಾಣಿ ಸಂಖ್ಯೆಯೂ ಇಲ್ಲದಂತಾಗಿದೆ. ಇದರಿಂದಾಗಿ ಹಲವು ಕನ್ನಡ ಪರ ಸಂಘಟನಾಕಾರರು, ಕನ್ನಡಾಭಿಮಾನಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.