ಕೊಲೆಯಲ್ಲಿ ಅಂತ್ಯವಾದ ಗ್ರಾಮ ಪಂಚಾಯಿತಿ ವಿಜಯೋತ್ಸವ: ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು! - ಕೊಲೆಯಲ್ಲಿ ಅಂತ್ಯವಾದ ಗ್ರಾಮ ಪಂಚಾಯತಿ ವಿಜಯೋತ್ಸವ
ಗ್ರಾಮ ಪಂಚಾಯಿತಿ ಚುನಾವಣಾ ವಿಜಯೋತ್ಸವ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದಲ್ಲಿ ನಡೆದಿದೆ. ಸೋತ ಅಭ್ಯರ್ಥಿ ಮನೆ ಮುಂದೆ ಗೆದ್ದ ವ್ಯಕ್ತಿ ವಿಜಯೋತ್ಸವ ಆಚರಿಸಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯ ಕಂಡಿದೆ.
![ಕೊಲೆಯಲ್ಲಿ ಅಂತ್ಯವಾದ ಗ್ರಾಮ ಪಂಚಾಯಿತಿ ವಿಜಯೋತ್ಸವ: ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು! Belgavi](https://etvbharatimages.akamaized.net/etvbharat/prod-images/768-512-10071423-thumbnail-3x2-net.jpg?imwidth=3840)
ಚಿಕ್ಕೋಡಿ/ ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಚುನಾವಣೆ ಕಾವು ಜೋರಾಗಿಯೇ ಇತ್ತು. ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಕೇವಲ ಶಬ್ಬೀರ್ ಅವರ ಗುಂಪು ವಿನ್ ಆಗ್ತಾ ಬರ್ತಿತ್ತು. ಗೆದ್ದು ಬಂದ ಮೇಲೆ ಗ್ರಾಮದಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಈ ಬಾರಿ ಬಶೀರ್ ಅವರ ಗುಂಪು ಚುನಾವಣೆಗೆ ನಿಂತು ಬರೊಬ್ಬರಿ 10 ಸ್ಥಾನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು.
ಗೆದ್ದ ನಂತರ ಬಶೀರ್ ತಂಡದವರು ಪಕ್ಕದ ಗ್ರಾಮ ಬಸಾಪುರಕ್ಕೆ ಹೋಗಿ ಸಂಬಂಧಿಕರಿಗೆ ಸಿಹಿ ಹಂಚಿ ಬಂದಿದ್ದಾರೆ. ಇವರು ಸಿಹಿ ಹಂಚಿ ಬಂದ ವಿಷಯ ಸೋತ ಶಬ್ಬೀರ್ ಮನೆಯವರಿಗೆ ತಿಳಿದಿದ್ದೇ ತಡ ಏಕಾಏಕಿ ಬಶೀರ್ ಮನೆ ಮುಂದೆ ಬಂದು ಶಬ್ಬೀರ್ ಬೆಂಬಲಿಗರು ದಾಂದಲೆ ಶುರು ಮಾಡಿದ್ದಾರೆ. ಇವರಿಗೆ ಬುದ್ದಿ ಹೇಳಿ ಕಳಿಸೋಕೆ ಮನೆಯಿಂದ ಹೊರ ಬಂದ ಶಾನೂರ ಮುಲ್ಲಾ ಅವರನ್ನ ಎಳೆದ ಶಬ್ಬೀರ್ ಮನೆಯವರು ಏಕಾಏಕಿ ಶಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡೋಕೆ ಶುರು ಮಾಡಿದ್ದಾರೆ. ನೋಡುತ್ತಿದ್ದಂತೆ ಶಾನೂರ ಮುಲ್ಲಾ ಕೊಲೆಯಾಗಿ ಹೋಗಿದೆ.
ಗ್ರಾಮದಲ್ಲಿ ಬಶೀರ್ ತಂಡ 10 ಸ್ಥಾನ ಗೆದ್ದಿದ್ದು, ಈ ಹಿಂದೆ ಗೆಲ್ಲುತ್ತ ಬಂದಿದ್ದ ಶಬ್ಬೀರ ಮುಲ್ಲಾ ತಂಡ ಠೇವಣಿ ಕಳೆದು ಕೊಂಡಿತ್ತು. ಹೀಗಾಗಿ ವಿಜಯೋತ್ಸವ ನಡೆಸುತ್ತಿದ್ದ ಬಶೀರ ಮನೆಯವರ ಮೇಲೆ ಶಬ್ಬೀರ ಮುಲ್ಲಾ ಕುಟುಂಬದವರು ಜಗಳ ಮಾಡೋಕೆ ಬಂದಿದ್ದಾರೆ. ಜಗಳ ಮಾತಿಗಷ್ಟೇ ಸೀಮಿತವಾಗದೇ ಕೈಲಿ ಕೋಲು, ರಾಡ್, ಹರಿತವಾದ ಕತ್ತಿ ಹಿಡಿಯುವರೆಗೆ ಬಂದು ಬಿಟ್ಟಿದೆ.
ಓದಿ: ಕೊಲೆಯಲ್ಲಿ ಅಂತ್ಯವಾದ ಗ್ರಾ.ಪಂ ಚುನಾವಣಾ ವಿಜಯೋತ್ಸವ
ನಾವು ಬೇಕಂತಾ ಪಟಾಕಿ ಸಿಡಿಸಿ ದೊಂಬಿ ಮಾಡಿದ್ದೇವೆ ಎಂದು ಸೋತವರು ಜಗಳಕ್ಕೆ ಬಂದ್ರು. ನಾವು ಪಟಾಕಿ ಸಿಡಿಸಿಲ್ಲ ಯಾವುದೇ ರೀತಿಯಲ್ಲಿ ದೊಂಬಿ(ಗಲಾಟೆ) ಮಾಡಿಲ್ಲ ಎಂದು ಹೇಳಿದರು ನಮ್ಮ ಜೊತೆ ಗಲಾಟೆ ಮಾಡಿದರು. ಸೋತವರು ಒಂದು ರೀತಿಯಲ್ಲಿ ಪ್ರೀ ಪ್ಲ್ಯಾನ್ ಮಾಡಿ ಗಲಾಟೆ ಮಾಡಿ ಕೊಲೆ ಮಾಡಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಅಲ್ತಾಪ್ ಮುಲ್ಲಾ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಜಹಾಂಗೀರ ಮುಲ್ಲಾ, ಸುಲ್ತಾನ ಸಾಬ್ ಮುಲ್ಲಾ, ಹಸನಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸಿಪ್ ಮುಲ್ಲಾ, ಮೋಸಿನ್ ಖಾಜಿ ಬಂಧಿತರು. ಸದ್ಯ 6 ಜನರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.