ಬೆಳಗಾವಿ: ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ರೀತಿಯಲ್ಲಿ 69% ಮೀಸಲಾತಿ ಹೆಚ್ಚಿಸಿ 9ನೇ ಪರಿಚ್ಛೇದಕ್ಕೆ ಸೇರಿಸಿದ ರೀತಿಯಲ್ಲಿ ನಮ್ಮಲ್ಲೂ ಆಗಬೇಕಿದೆ. ದೇಶದಲ್ಲಿ ಅವರು ಒಬ್ಬರೇ ಆ ರೀತಿ ಮೀಸಲಾತಿ ಹೆಚ್ಚಳ ಮಾಡಿ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಸರ್ಕಾರ ಆ ಪ್ರಯತ್ನ ಮಾಡಿದರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಅವರು ಗೋಕಾಕ ನಗರದಲ್ಲಿ ಮರಾಠ ಸಮುದಾಯದ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಾ, ಈಗಾಗಲೇ ಹಲವು ಸಮಾಜಗಳು ಮೀಸಲಾತಿಯನ್ನು ಕೇಳುತ್ತಿದ್ದಾರೆ, ಪಂಚಮಸಾಲಿ, ಮರಾಠ, ಒಕ್ಕಲಿಗ, ಉಪ್ಪಾರ ಸಮುದಾಯಗಳು ಮೀಸಲಾತಿಯನ್ನು ಕೇಳುತ್ತಿದ್ದಾರೆ ಒಂದು ಕುರ್ಚಿ ನೀಡಿ 20 ಜನಕ್ಕೆ ಕೂತುಕೊಳ್ಳಿ ಎಂದರೆ ಅದು ಸಾಧ್ಯವಾಗುವುದಿಲ್ಲ ಮೀಸಲಾತಿ ಅರ್ಥ ಕಳೆದುಕೊಳ್ಳುತ್ತದೆ. ಇದರಿಂದ ಯಾರಿಗೂ ಅನ್ಯಾಯ ಆಗದಂತೆ ಮುಖ್ಯಮಂತ್ರಿ ಅವರು ಮೀಸಲಾತಿ ವಿಚಾರದಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲರಿಗೂ ಮೀಸಲಾತಿ ನೀಡುತ್ತಾರೆ ಎಂದು ಹೇಳಿದರು.
ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನಪಡುತ್ತೇನೆ. ಹಿಂದುಳಿದ ಸಮಾಜಕ್ಕೆ ಹಾಗೂ ಹಿಂದೂಪರ ಹೋರಾಟ ಮಾಡುವ ಸಮುದಾಯಕ್ಕೆ ಸರ್ಕಾರ ಮೀಸಲಾತಿ ನೀಡಬೇಕು. ರಮೇಶ್ ಜಾರಕಿಹೊಳಿ ಅವರು ಹಾಗೂ ನಾನು ಮೀಸಲಾತಿ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಈ ಸಮುದಾಯದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟದ್ದಕ್ಕೆ ತೀವ್ರ ನೋವಾಗಿದೆ. ಒಂದು ಸಮಾಜದಿಂದ ಓರ್ವ ಪ್ರತಿನಿಧಿಗೆ ಸಚಿವ ಸಂಪುಟದಲ್ಲಿ ಅಥವಾ ನಿಗಮ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದರೆ ಆ ಸಮಾಜದ ಸಾಧಕ ಬಾಧಕಗಳನ್ನು ಸರ್ಕಾರ ಗಮನಕ್ಕೆ ತರಬಹುದು ಎಂದರು.
ಅಸಮಾಧಾನ ಹೊರಹಾಕಿದ ಜಾರಕಿಹೊಳಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ನಮಗೆ ತೀವ್ರ ನೋವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಶ್ರೀಮಂತ್ ಪಾಟೀಲ್ ಅವರ ಪಾತ್ರ ಬಹುಮುಖ್ಯ. ಕೆಲವು ವಿಚಾರದಲ್ಲಿ ಅನ್ಯಾಯವಾಗಿದೆ, ನಮ್ಮದೇ ಸರ್ಕಾರ ಇರೋದ್ರಿಂದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತುಕತೆ ನಡೆಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಕ್ಷತ್ರೀಯ ಮರಾಠ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ ಮಾತನಾಡಿ ಕ್ಷತ್ರೀಯ ಮರಾಠ ಸಮಾಜದವರು ಸಂಘಟಿತರಾದರೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 10 ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಬಹುದು ಹೇಳಿದರು.
ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಸಿಗಬೇಕಾಗಿರುವ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡೋಣ. ಪಕ್ಷಾತೀತವಾಗಿ ಹೋರಾಡಿದರೆ ಖಂಡಿತವಾಗಿಯೂ ಈ ಸಮುದಾಯಕ್ಕೆ ನ್ಯಾಯ ದೊರಕುತ್ತದೆ. ಮರಾಠ ಸಮಾಜದ ಬೇಡಿಕೆಗಳಿಗೆ ನಮ್ಮ ಕುಟುಂಬ ಸಿದ್ಧವಿದೆ ಎಂದು ಬಾಲಚಂದ್ರ ಜಾರಕಿಹೊಳಿ ಅಭಯ ನೀಡಿದರು.
ಮರಾಠ ಸಮಾಜಕ್ಕೆ 6 ಗುಂಟೆ ನಿವೇಶನ: ಇದೇ ವೇಳೆ ಗೋಕಾಕ್ ನಗರಸಭೆಯಿಂದ 6 ಗುಂಟೆ ನಿವೇಶನವನ್ನು ಮರಾಠ ಸಮಾಜಕ್ಕೆ ನೀಡುವ ಠರಾವು ಪತ್ರವನ್ನು ಸ್ವಾಮೀಜಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆರೆದ ಸಮಾಜ ಬಾಂಧವರು ಪಟಾಕಿ ಸಿಡಿಸಿ ತಮ್ಮ ಸಂಭ್ರಮಿಸಿದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಸೂಚಿಸಿದ ಬಿ.ಎಸ್.ಯಡಿಯೂರಪ್ಪ