ಬೆಳಗಾವಿ : ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ವಿಚಾರವಾಗಿ ನಿಯಮ 69 ರ ಅಡಿ ಚರ್ಚೆ ಆರಂಭಿಸಿದ ಅವರು, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಿತ್ಯ ಒಂದೊಂದು ಹೇಳಿಕೆ ಕೊಡುತ್ತಾರೆ. ಬರ ಘೋಷಣೆ ಮಾಡಲು ಹಾಗೂ ಪರಿಹಾರ ಕೊಡಲು ವಿಳಂಬ ಮಾಡಲಾಗುತ್ತಿದೆ. ರೈತರ ಸಂಕಷ್ಟಕ್ಕೆ ಮಿಡಿಯಬೇಕು ಎಂದು ನಾವೆಲ್ಲ ಮಾತನಾಡುತ್ತೇವೆ. ಆಡಳಿತ ಪಕ್ಷಕ್ಕೆ ತಾಯಿ ಹೃದಯ ಇರಬೇಕು ಎಂದು ಕಿಡಿಕಾರಿದರು.
ಕಟುಕರ ಹೃದಯವನ್ನು ಸರ್ಕಾರ ಹೊಂದಿದೆ. ರೈತರ ಖಾತೆಗೆ ಯಾವುದೇ ಹಣವನ್ನು ಹಾಕಿಲ್ಲ. ಎರಡು ಸಾವಿರ ಘೋಷಣೆ ಮಾಡಿದರೂ ಅದು ಜಾರಿಯಾಗಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎಂದರೆ ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟಿದ್ದೀರಾ?. ಗ್ಯಾರಂಟಿ ಘೋಷಣೆಗಳ ಬಗ್ಗೆ ಜಾಹೀರಾತು ಕೊಟ್ಟಿದ್ದಾರೆ. ತೆಲಂಗಾಣದ ಜನರಿಗೆ ರಾಜ್ಯದ ಗ್ಯಾರಂಟಿ ಘೋಷಣೆ ಜಾರಿಯಾಗುತ್ತಾ?. ಯಾರದ್ದೋ ದುಡ್ಡು ತೆಲಂಗಾಣದ ಜಾತ್ರೆ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ರೈತರ ಬೆಳೆ ನಷ್ಟಕ್ಕೆ ಕೂಡಲೇ ಮೂರು ಪಟ್ಟು ಪರಿಹಾರ ಘೋಷಿಸಬೇಕು. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಫೂರ್ಣ ವಿಫಲವಾಗಿದೆ. ಅಧಿವೇಶನ ನಡೆಯುತ್ತಿದೆ ವಿಪಕ್ಷದವರು ಕೇಳುತ್ತಾರೆ ಎನ್ನುವ ಕಾರಣಕ್ಕೆ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ತಾತ್ಕಾಲಿಕವಾಗಿ ತಲಾ 2000 ರೂ. ಪರಿಹಾರ ಘೋಷಿಸಿದ್ದೀರಿ. ಅದು ಕೂಡ ಇನ್ನೂ ಫಲಾನುಭವಿಗೆ ತಲುಪಿಲ್ಲ. ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ಆದರೆ, ಸರ್ಕಾರ ಅದನ್ನು ಸಮರ್ಪಕವಾಗಿ ಖರ್ಚು ಮಾಡಲು ಆದೇಶ ನೀಡಿಲ್ಲ. ಅಧಿಕಾರಿಗಳಿಗೂ ಖರ್ಚು ಮಾಡುವ ಮನಸ್ಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ 700 ಕೋಟಿಗೂ ಹೆಚ್ಚು ಹಣವಿದೆ ಅನ್ನುತ್ತಾರೆ. ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೆ ಕೇವಲ 25 ಲಕ್ಷ ರೂ. ಕುಡಿಯುವ ನೀರಿಗೆ ನೀಡಿದ್ದಾರೆ. ಈ ಹಣದಲ್ಲಿ ಯಾವ ರೀತಿ ಬರ ನಿರ್ವಹಣೆ ಮಾಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮ ಸರ್ಕಾರದಲ್ಲಿ ಎನ್‌ಡಿಆರ್‌ಎಫ್ ನಿಯಮದ ದರಕ್ಕಿಂತ ದುಪ್ಪಟ್ಟು ಕೊಟ್ಟಿರುವಾಗ 14 ಬಾರಿ ಬಜೆಟ್ ಮಂಡಿಸಿರುವ ಹಾಗೂ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮೂರು ಪಟ್ಟು ಪರಿಹಾರ ಕೋಡಬೇಕಿತ್ತು. ಆಗ ಜನ ಇದು ನಮ್ಮ ಸಿದ್ದರಾಮಯ್ಯನವರ ಸರ್ಕಾರ ಎಂದು ಖುಷಿ ಪಡುತ್ತಿದ್ದರು. ಸರ್ಕಾರ ಎಂಟು ಹತ್ತು ವಾರಕ್ಕೆ ಆಗುವಷ್ಟು ಮೇವು ರಾಜ್ಯದಲ್ಲಿದೆ ಎಂದು ಹೇಳಿದೆ. ನಾನು ಪ್ರವಾಸ ನಡೆಸಿದ ವೇಳೆ ಯಾವ ಜಿಲ್ಲೆಯಲ್ಲೂ ಮೇವು ಲಭ್ಯವಿಲ್ಲ. ಜಿಲ್ಲಾಧಿಕಾರಿಗಳು ಮೇವು ಖರೀದಿಗೆ ಸರ್ಕಾರ ಆದೇಶವನ್ನೇ ಮಾಡಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತೀವ್ರ ಮೇವಿನ ಕೊರತೆ ಉಂಟಾಗಲಿದೆ. ಕೂಡಲೇ ಮೇವು ಖರೀದಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಅವರು ಜನತಾದರ್ಶನಕ್ಕೆ ಆದೇಶ ಮಾಡಿದ ಮೊದಲ ತಿಂಗಳು ಎಲ್ಲ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಜನತಾದರ್ಶನ ಮಾಡಿದ್ದಾರೆ. ಆ ನಂತರ ಎರಡನೇ ತಿಂಗಳಲ್ಲಿ ಕೇವಲ ಶೇ.13ರಷ್ಟು, ಮೂರನೇ ತಿಂಗಳಲ್ಲಿ ಶೇ.14ರಷ್ಟು ಜನ ಮಾತ್ರ ಜನತಾದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿಗಳ ಆದೇಶವನ್ನು ಮಂತ್ರಿಗಳು ಪಾಲನೆ ಮಾಡುವುದಿಲ್ಲ ಎಂದರೆ ಈ ಸರ್ಕಾರ ಹೇಗೆ ನಡೆಯುತ್ತಿರಬಹುದು ಎಂದು ಟೀಕಿಸಿದರು.
ಇದನ್ನೂ ಓದಿ : ಆರ್ ಅಶೋಕ್ಗೆ ಶುಭ ಕೋರಲು ನಿರಾಕರಿಸಿದ ಬಸನಗೌಡ ಯತ್ನಾಳ್
ಐ ಆಮ್ ನಾಟ್ ಹ್ಯಾಪಿ ವಿಥ್ ಯುವರ್ ಸ್ಪೀಚ್ : ಐ ಆಮ್ ನಾಟ್ ಹ್ಯಾಪಿ ವಿಥ್ ಯುವರ್ ಸ್ಪೀಚ್, ಇನ್ನೂ ಸ್ವಲ್ಪ ಜೋರಾಗಿ ಮಾತನಾಡಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಪಕ್ಷ ನಾಯಕ ಆರ್.ಅಶೋಕ್ಗೆ ಕುಟುಕಿದರು.
ಬರ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಸಲಹೆ ಕೊಟ್ಟ ರಾಯರೆಡ್ಡಿ, ಇನ್ನೂ ವಿರೋಧ ಪಕ್ಷದ ನಾಯಕರ ಹಾಗೆ ಮಾತನಾಡ್ತಿಲ್ಲ. ನಿಮ್ಮ ಭಾಷಣ ಇನ್ನೂ ವಿರೋಧ ಪಕ್ಷದ ರೀತಿ ಇಲ್ಲ. ಅರ್ಧ ಆಡಳಿತ ಪಕ್ಷದ ಕಡೆ ಇದ್ದಂತಿದೆ. ನಾನು ಖುಷಿಯಾಗಿಲ್ಲ, ಇನ್ನೂ ಸ್ವಲ್ಪ ಜೋರಾಗಿ ಮಾತನಾಡಿ ಎಂದು ಸಲಹೆ ನೀಡಿದರು.