ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಉಚಿತ ಅಂತ್ಯಕ್ರಿಯೆ ಭರವಸೆ ಬಗ್ಗೆ ಬೆಳಗಾವಿಗರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶವಸಂಸ್ಕಾರಕ್ಕೆ ಹಣ ಇಲ್ಲದ ಹಲವು ಬಡ ಹಾಗೂ ನಿರ್ಗತಿಕರ ಕುಟುಂಬಗಳಿವೆ. ಶವಸಂಸ್ಕಾರಕ್ಕೆ ಹಣಕ್ಕೆ ಕೈವೊಡ್ಡಿದವರು ಹಲವರಿದ್ದಾರೆ. ಇಂತಹ ವರ್ಗಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದರಿಂದ ಸಾರ್ವಜನಿಕರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದರು.
ಬೆಳಗಾವಿ ಸುತ್ತಮುತ್ತ ನಾಲ್ಕು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವ ಯೋಜನೆ ನಮ್ಮದು. ಅಲ್ಲದೇ ಒಂದೂವರೆ ವರ್ಷದೊಳಗೆ ಸ್ಮಾರ್ಟ್ಸಿಟಿ ಯೋಜನೆ ಪೂರ್ಣಗೊಳಿಸುತ್ತೇವೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿ ನಗರಕ್ಕೆ ಮಹತ್ವ ಇದೆ. ಹಾಗೆಯೇ ಚುನಾವಣೆ ನಂತರ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಚೆನ್ನಮ್ಮ ವಿವಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡೀ ವಿಶ್ವ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಆರಂಭಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಾಧನೆ ಏನು?ಡಿ ಕೆ ಶಿವಕುಮಾರ್ ಅವರ ಪಕ್ಷ ಈ ದೇಶದಲ್ಲಿ ಅರವತ್ತು ವರ್ಷ ಆಡಳಿತ ಮಾಡಿದೆ. ತಮ್ಮ ಸಾಧನೆ ಏನು ಎಂದು ಹೇಳಲಿ ಎಂದಿರುವ ಅವರು, ಸುರೇಶ್ ಅಂಗಡಿ ಸಾವು ಕೋವಿಡ್‌ನಿಂದ ಆಗಿರುವುದು ಎಲ್ಲರಿಗೂ ಗೊತ್ತಿದೆ. ಕೊವಿಡ್ ನಿಯಮ ಎಲ್ಲರಿಗೂ ಒಂದೇ, ಇದರಲ್ಲಿ ರಾಜಕಾರಣ ಮಾಡಬಾರದು ಎಂದರು. ಹಾಗೆ ಪೆಟ್ರೋಲ್, ಡೀಸೆಲ್ ಸ್ವಲ್ಪ ಹೆಚ್ಚಾಗಿದೆ ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತೆ ಎಂದು ಇದೇ ವೇಳೆ ತಿಳಿಸಿದರು.