ಅಥಣಿ(ಬೆಳಗಾವಿ) : ಜನವರಿ 14 ಅಥವಾ ಯುಗಾದಿ ಹಬ್ಬದಂದು ಪಂಚಮಸಾಲಿ ಸಮಾಜಕ್ಕೆ ಸಿಹಿ ಸುದ್ದಿಯೊಂದನ್ನು ನಾಡಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡುತ್ತಾರೆ ಎಂದು ಕೂಡಲಸಂಗಮ ಪೀಠದ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.
ಪಂಚಮಸಾಲಿ 2ಎ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಲಾಗಿದೆ. ಅಲ್ಲದೇ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮುಖಾಂತರ ತೆರಳಿ, ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಪಂಚಮಸಾಲಿ ಸಮಾಜದ ಬಾಂಧವರು ಮಾಡಿದ್ದಾರೆ.
ಈ ಪಾದಯಾತ್ರೆಗೆ ಒಂದು ವರ್ಷ ತುಂಬುವುದರಿಂದ ಜ.14ನೇ ತಾರೀಖು ಕೂಡಲಸಂಗಮದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಾರೆ. ಜ.14 ಅಥವಾ ಯುಗಾದಿ ಹಬ್ಬದಂದು ಸಿಎಂ ನಮಗೆ ಬೇವು-ಬೆಲ್ಲ ನೀಡುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವುದರ ಪರಿಣಾಮ ಹಲವಾರು ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತಿದೆ. ನಾವೇನು ನೇರವಾಗಿ ಚುನಾವಣೆಯಲ್ಲಿ ಭಾಗವಹಿಸದಿದ್ದರೂ ಸಮಾಜದ ಬಾಂಧವರು ಆಡಳಿತರೂಢ ಸರ್ಕಾರದ ಮೇಲೆ ಮುನಿಸಿಕೊಂಡಿರುವ ಪರಿಣಾಮ ಈ ರೀತಿ ಸೋಲಾಗುತ್ತಿದೆ.
ಈಗಾಗಲೇ ಪಂಚಮಸಾಲಿ ಸಮಾಜದ ಶಾಸಕರಿಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹಿಂದುಳಿದ ವರ್ಗದ ಇಲಾಖೆಯಿಂದ ಸಿಎಂ ಅವರಿಗೆ ವರದಿ ಸಲ್ಲಿಸಲಾಗಿದೆ. ವರದಿ ಸಂಪೂರ್ಣ ಆದ ಬಳಿಕ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಚರ್ಚೆ ಮಾಡಿ ನಮಗೆ ಆದಷ್ಟು ಬೇಗನೆ ಸಿಹಿ ಸುದ್ದಿ ನೀಡುತ್ತಾರೆ ಎಂದು ಜಗದ್ಗುರುಗಳು ವಿಶ್ವಾಸ ವ್ಯಕ್ತಪಡಿಸಿದರು.
ಜ.14ರ ಬಳಿಕ ಬದಲಾವಣೆಯ ನಿರೀಕ್ಷೆ : ಹಲವಾರು ಬಾರಿ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಅವರು ರಾಜಕೀಯವಾಗಿ ಹೇಳಿದ ಭವಿಷ್ಯ ನಿಜವಾಗಿದೆ. ಕಳೆದ ಸಂಕ್ರಾಂತಿ ಹಬ್ಬದಂದು ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದು ಹೇಳಿದ್ದರು, ಅದು ಕೂಡ ನಿಜವಾಗಿದೆ. ಮತ್ತೆ ಜನವರಿ 14ರ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆಯಾಗುತ್ತದೆ ಎಂಬ ಮಾತನ್ನು ಹೇಳಿದ್ದಾರೆ. ಆದರೂ ಆಗಬಹುದು ಎಂದು ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಗಡಿಭಾಗದ ಚೆಕ್ ಪೋಸ್ಟ್‌ಗಳಿಗೆ ಡಿಸಿ ಭೇಟಿ : ಕಟ್ಟುನಿಟ್ಟಿನ ತಪಾಸಣೆ ಮಾಡುವಂತೆ ಸೂಚನೆ
ಮುಂದಿನ ಮುಖ್ಯಮಂತ್ರಿ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಅವರು ಆಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ, ಶ್ರೀಗಳು ನಗೆ ಬೀರುತ್ತಾ, ನಮಗೆ ಮುಖ್ಯಮಂತ್ರಿ ಸ್ಥಾನ ಅವಶ್ಯಕತೆ ಇಲ್ಲ.
ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಅತಿ ಮುಖ್ಯವಾಗಿದೆ. ಪಂಚಮಸಾಲಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಈ ಸಮಾಜಕ್ಕೆ ಮೀಸಲಾತಿ ಅತಿ ಮುಖ್ಯವಾಗಿದೆ. ಹಾಗಾಗಿ, ಸರ್ಕಾರ ಆದಷ್ಟು ಬೇಗನೆ ಮೀಸಲಾತಿ ಘೋಷಿಸಬೇಕು ಎಂದರು.