ಬೆಳಗಾವಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸ್ಮಗ್ಲಿಂಗ್ ಆಗುತ್ತಿದ್ದ 4.9 ಕೆಜಿ ಚಿನ್ನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಕಿರಣ್ ವೀರನಗೌಡರನನ್ನು ಮತ್ತೆ 10 ದಿನ ಸಿಐಡಿ ಕಸ್ಟಡಿಗೆ ನೀಡಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಸಂಬಂಧ ಆರೋಪಿ ಕಿರಣ್ ವೀರನಗೌಡರನ್ನು ಜೂನ್ 6 ರಂದು ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆಗ 14 ದಿನಗಳ ಕಾಲ ಕಿರಣ್ ವೀರನಗೌಡರನ್ನು ಸಿಐಡಿ ವಶಕ್ಕೆ ನೀಡಲಾಗಿತ್ತು. ಅವಧಿ ಮುಗಿದ ಕಾರಣ ಸಿಐಡಿ ಅಧಿಕಾರಿಗಳು ಮತ್ತೆ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಮತ್ತೆ 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಏನಿದು ಘಟನೆ?
ಮಂಗಳೂರು ಮೂಲದ ತಿಲಕ ಪೂಜಾರಿಗೆ ಸೇರಿದ 4.9 ಕೆಜಿ ಚಿನ್ನವನ್ನು ಮುಂಬೈಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಯಮಕನಮರಡಿ ಪೊಲೀಸರು ವಾಹನ ಸೀಜ್ ಮಾಡಿದ್ದರು. ಏರ್ ಬ್ಯಾಗಿನಲ್ಲಿದ್ದ ಚಿನ್ನವನ್ನು ಕಿರಣ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಕದ್ದು ಮಾರಾಟ ಮಾಡಿದ್ದರು. ಪ್ರಕರಣ ಸಂಬಂಧ ಐಜಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.