ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನಾಳೆಯಿಂದ 14 ದಿನ ಜನತಾ ಕರ್ಫ್ಯೂ ಜಾರಿಗೆ ನಿರ್ಧರಿಸಿದೆ. ಇದರಿಂದ ಬೆಂಗಳೂರು ತೊರೆದು ಜನರು ತಮ್ಮೂರಿನತ್ತ ಆಗಮಿಸುತ್ತಿದ್ದಾರೆ.
ಹೀಗೆ ಬರುತ್ತಿರುವ ಜನರನ್ನು ಗೋಕಾಕ್ ತಾಲೂಕಾಡಳಿತ ಕೋವಿಡ್ ಟೆಸ್ಟ್ಗೆ ಒಳಪಡಿಸುತ್ತಿದೆ. ಗೋಕಾಕ್ ನಗರಸಭೆ ಹಾಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
ಬೆಂಗಳೂರು ಸೇರಿದಂತೆ ಬೇರೆ ಭಾಗಗಳಿಂದ ಗೋಕಾಕಿಗೆ ಆಗಮಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಬಸ್ಗಳನ್ನು ನಗರದ ಹೊರವಲಯದಲ್ಲಿ ತಡೆಯಲಾಗುತ್ತಿದೆ. ಅಲ್ಲಿನ ಚೆಕ್ ಪೋಸ್ಟ್ನಲ್ಲಿ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನದಲ್ಲಿ ನಗರಕ್ಕೆ ಆಗಮಿಸುತ್ತಿರುವ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
ವರದಿ ಬರುವವರೆಗೆ ಪ್ರತಿಯೊಬ್ಬರೂ ಹೋಮ್ ಕ್ವಾರಂಟೈನ್ ಆಗುವಂತೆ ಆರೋಗ್ಯಾಧಿಕಾರಿಗಳು ನಿರ್ದೇಶನ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡುತ್ತಿದ್ದಾರೆ.
ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ಗೋಕಾಕ್ ತಾಲೂಕಾಡಳಿತ ದಿಟ್ಟ ಹೆಜ್ಜೆ ಇರಿಸಿದೆ. ಕಳೆದ ವರ್ಷ ವಲಸಿಗರಿಂದಲೇ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಮುಖ್ಯ ಕಾರಣವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ತಾಲೂಕಾಡಳಿತ ಮುಂದಾಗಿದೆ.