ಬೆಳಗಾವಿ: ಬಳ್ಳಾರಿ ಜಿಲ್ಲೆ ವಿಭಜನೆ ಬಳಿಕ ಬೆಳಗಾವಿ ಜಿಲ್ಲೆಯ ವಿಭಜನೆ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಗೋಕಾಕ್ ಪ್ರತ್ಯೇಕ ಜಿಲ್ಲೆ ಮಾಡುವಂತೆ ಗೋಕಾಕಿನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದ ನಿಯೋಗ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಗೋಕಾಕ್ ಗೃಹ ಕಚೇರಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗೋಕಾಕ್-ಚಿಕ್ಕೋಡಿ ಜಿಲ್ಲೆ ರಚನೆಗೆ ನಿರ್ಣಯಿಸಲಾಗಿತ್ತು. ಆದರೆ ಆಗ ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಪಟ್ಟು ಹಿಡಿದರು. ಹೀಗಾಗಿ ಪ್ರತ್ಯೇಕ ಜಿಲ್ಲೆಯ ವಿಚಾರ ಅಷ್ಟಕ್ಕೆ ನಿಂತಿದೆ ಎಂದರು.
ಹೊಸ ತಾಲೂಕು ರಚನೆ ಮಾಡಿ ಬಳಿಕ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಮಾಡಬೇಕಿದೆ. ಇದೇ ತಾಂತ್ರಿಕ ಕಾರಣದಿಂದ ಗೋಕಾಕ್ ಜಿಲ್ಲೆಯಾಗುವುದು ಬಾಕಿ ಉಳಿದಿದೆ. ಕೋವಿಡ್, ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣದಿಂದ ತಾಲೂಕು ರಚನೆ ಬಾಕಿ ಉಳಿದಿದೆ. ಸುಳ್ಳು ಹೇಳುವುದು ನನಗೆ ಬರೋದಿಲ್ಲ. ಬಳ್ಳಾರಿ ಜಿಲ್ಲೆ ವಿಭಜನೆ ಏಕೆ ಆಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಜೆಟ್ ಮುಗಿದ ಬಳಿಕ ನಿಯೋಗ ಹೋಗಿ ಸಿಎಂ ಭೇಟಿ ಮಾಡೋಣ. ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ಮಾಡೋಣ ಎಂದು ಸಚಿವ ರಮೇಶ್ ಜಾರಕಿಹೊಳಿ ನಿಯೋಗಕ್ಕೆ ಭರವಸೆ ನೀಡಿದರು.