ಬೆಳಗಾವಿ: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕಮಿಷನರ್ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಈರನಗೌಡ ಪಾಟೀಲ (45) ಸಾವನ್ನಪ್ಪಿದ ಆರೋಪಿ. ಶುಕ್ರವಾರ ಸಂಜೆ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತರುವಾಗ ಕಾಕತಿ ಗ್ರಾಮದ ಮಾರ್ಗ ಮಧ್ಯೆಯೇ ಈರನಗೌಡನ ಆರೋಗ್ಯ ಹದಗೆಟ್ಟಿದೆ. ಈ ವೇಳೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿ, ಅವರ ಆರೋಗ್ಯ ಸುಧಾರಿಸಿದ ನಂತರ ಠಾಣೆಗೆ ಕರೆ ತಂದಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ದಂಧೆಯಲ್ಲಿ ರೈಲ್ವೆ ಹೊರಗುತ್ತಿಗೆ ನೌಕರರು ಭಾಗಿ!: ರೈಲು ಮುಖಾಂತರವೇ ಪೂರೈಕೆ
ಸ್ವಲ್ಪ ಸಮಯದ ಬಳಿಕ ವಿಚಾರಣೆಗೆ ಒಳಪಡಿಸಿದಾಗ ಮತ್ತೆ ಆರೋಪಿ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ಕೂಡಲೇ ಆತನನ್ನು ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಒಂದೂವರೆ ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯಕ್ಕೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪುಂಡರ ಕಿರಿಕ್: ಯಾಕ್ರಪ್ಪ ಗಲಾಟೆ ಮಾಡ್ತೀರಾ ಅಂದಿದಕ್ಕೆ ಮನೆ ಮಾಲೀಕರ ಮೇಲೆ ಹಲ್ಲೆ