ಬೆಳಗಾವಿ: ತಾಲೂಕಿನ ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಕಾಮುಕರಿಗೆ ಇಲ್ಲಿನ 3 ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ಒಬ್ಬರಿಗೆ ಐದು ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಸಂಜು ಸಿದ್ದಪ್ಪ ದಡ್ಡಿ(24), ಸುರೇಶ ಭರಮಪ್ಪ ಬೆಳಗಾವಿ(24), ಸುನೀಲ ಲಗಮಪ್ಪ ಡುಮ್ಮಗೋಳ(21), ಹುಕ್ಕೇರಿ ತಾಲೂಕು ಮಣಗುತ್ತಿಯ ಅಂಬೇಡ್ಕರ್ ಗಲ್ಲಿಯ ಮಹೇಶ ಬಾಳಪ್ಪ ಶಿವನ್ನಗೋಳ(23) ಮತ್ತು ಬೈಲಹೊಂಗಲದ ಸೋಮಶೇಖರ ದುರಡುಂಡೇಶ್ವರ ಶಹಾಪುರ(23) ಶಿಕ್ಷೆಗೊಳಗಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 33 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ಪ್ರಕರಣದ ವಿವರ:
ಹಾಸ್ಟೆಲ್‌ನಲ್ಲಿದ್ದ ಬಾಲಕಿಯು 2017ರ ಫೆ.15ರಂದು ಸ್ನೇಹಿತನೊಂದಿಗೆ ಗುಡ್ಡಕ್ಕೆ ತೆರಳಿ ಅಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಕೃತ್ಯ ನಡೆದಿತ್ತು. ಆರೋಪಿಗಳು ಸೇರಿಕೊಂಡು ಗೆಳೆಯನಿಂದಲೂ ಆಕೆಯ ಮೇಲೆ ಬಲವಂತವಾಗಿ ಸಂಭೋಗ ಮಾಡಿಸಿದ್ದರು. ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳು ಹಾಗೂ 300 ರೂಪಾಯಿ ನಗದು ಕಿತ್ತುಕೊಂಡಿದ್ದರು. ಸಂಭೋಗದ ಭಂಗಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಆಕೆಯ ಗೆಳೆಯನನ್ನು ಥಳಿಸಿ, ನಂತರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆನಂತರ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದರು. ಆಲ್ಲದೇ 20 ಸಾವಿರ ರೂಪಾಯಿ ಹಣ ತಂದು ಕೊಡಬೇಕು. ಇಲ್ಲವಾದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೋ ಹರಿಬಿಡುವುದಾಗಿ ಹಾಗೂ ಆಕೆಯನ್ನು ಮತ್ತು ಆಕೆಯ ಮನೆಯವರನ್ನು ಕೊಲ್ಲುವುದಾಗಿ ಹೆದರಿಸಿದ್ದರು.
"ದ್ವಿಚಕ್ರ ವಾಹನದ ಪೆಟ್ರೋಲ್ ಪೈಪ್ ಕಸಿದುಕೊಂಡು ದೌರ್ಜನ್ಯ ನಡೆಸಿದ್ದರು. ರಾತ್ರಿ 9 ರ ವರೆಗೂ ನಮ್ಮನ್ನು ಬಿಡದೆ ಕಾಡಿದರು" ಎಂಬ ಸಂತ್ರಸ್ತೆ ಹೇಳಿಕೆ ಆಧರಿಸಿ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸಂಬಂಧ ತನಿಖಾಧಿಕಾರಿ ರಮೇಶ ಬಿ. ಗೋಕಾಕ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ವಿ. ಎಲ್. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದ್ದಾರೆ.