ಚಿಕ್ಕೋಡಿ: ಗ್ರಾಮ ಪಂಚಾಯತಿ ಚುನಾವಣೆ ಬಂದರೆ ಸಾಕು ಚುನಾವಣೆಯಲ್ಲಿ ಸ್ಪರ್ಧಿಸಲು ನಾ ಮುಂದೆ, ತಾ ಮುಂದೆ ಅನ್ನೋ ಪೈಪೋಟಿ ಕಂಡುಬರುತ್ತದೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಇಲ್ಲೊಂದು ಗ್ರಾಮ ಪಂಚಾಯತಿ ರಚನೆಯಾದಾಗಿನಿಂದ ಕೇವಲ ಒಂದು ಬಾರಿ ಮಾತ್ರವೇ ಮತದಾನ ನಡೆದಿದೆ. ಉಳಿದ ಚುನಾವಣೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮ ಪಂಚಾಯತಿಗೆ ಕರಗಾಂವ, ಡೋಣವಾಡ ಮತ್ತು ಹಂಚನಾಳಕೆರೆ ಗ್ರಾಮಗಳು ಸೇರುತ್ತವೆ. 16 ಸದಸ್ಯ ಸ್ಥಾನಗಳನ್ನು ಹೊಂದಿರುವ ಪಂಚಾಯತಿಯಲ್ಲಿ ಆರು ವಾರ್ಡ್ಗಳಿವೆ. ಕರಗಾಂವ ಗ್ರಾಮದಲ್ಲಿ 1962 ರಿಂದ ರಚನೆಯಾದ ಪಂಚಾಯತಿಯಲ್ಲಿ ಕಳೆದ 2015ರಲ್ಲಿ ಚುನಾವಣೆ ಜರುಗಿದ್ದು ಹೊರತು ಪಡಿಸಿದರೆ 58 ವರ್ಷಗಳ ಕಾಲ ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿದೆ.
ಕಳೆದ 1962ರಿಂದ ಕರಗಾಂವ ಗ್ರಾಮ ಪಂಚಾಯತಿಗೆ ಇಲ್ಲಿಯವರಿಗೆ ಕೇವಲ ಒಂದು ಬಾರಿ ಚುನಾವಣೆ ನಡೆದಿದೆ. ಇದಕ್ಕೆಲ್ಲ ಗ್ರಾಮದ ಹಿರಿಯ ಮುಖಂಡ ಡಿ.ಟಿ. ಪಾಟೀಲ್ (ಕಾಕಾ) ಹಾಗೂ ಡೋನವಾಡದ ಹಿರಿಯ ವಕೀಲ ಟಿ.ವೈ. ಕಿವಡ ಪ್ರಯತ್ನವೇ ಕಾರಣ.
ಮುಖಂಡರ ವಿಶ್ವಾಸ ಹಾಗೂ ಸತತ ಪ್ರಯತ್ನದಿಂದ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿರುವ ಕರಗಾಂವ ಪಂಚಾಯತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ಪ್ರಯತ್ನ ಜೋರಾಗಿದೆ. ಆದರೆ, ಯುವಕರು, ಕೆಲ ಸಮುದಾಯಗಳ ಅವಿರೋಧಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ಮಾತು ಕೇಳಿಬರುತ್ತಿವೆ. 2015ರಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದಿದ್ದು, ಈ ಬಾರಿ ಮತದಾನ ನಡೆಯುತ್ತಾ ಇಲ್ಲ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ...ಗ್ರಾಮಗಳಲ್ಲಿ ಪ್ರಜಾಪ್ರಭುತ್ವದ ಉತ್ಸವ: ನಿಮ್ಮೂರಲ್ಲಿ ಮತದಾನ ಯಾವತ್ತು ಗೊತ್ತೇ?