ಬೆಳಗಾವಿ : ಜಿಲ್ಲೆಯ ಗೋಕಾಕ್ ತಾಲೂಕಿನ ಧೂಪದಾಳ ಗ್ರಾಮದ ಪ್ರಾಣಿಪ್ರೇಮಿ ಸ್ನೇಹಿತರಿಬ್ಬರು ಜನವಸತಿ ಪ್ರದೇಶಕ್ಕೆ ಬಂದ ಹಾವುಗಳನ್ನು ಹಿಡಿದು ಆರೈಕೆ ಮಾಡಿ ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಜನವಸತಿ ಪ್ರದೇಶಕ್ಕೆ ಬಂದ ಹಾವುಗಳನ್ನು ಜನರು ಕೊಲ್ಲುತ್ತಿರುವುದನ್ನು ಮನಗಂಡ ಪವನ್ ರಜಪೂತ್ ಹಾಗೂ ಸುಭಾನಿ ಮೇತ್ರಿ ಎಂಬುವರು ಉರಗತಜ್ಞರ ಬಳಿ ಮಾಹಿತಿ ಪಡೆದು ಗಾಯಾಳು ಹಾವುಗಳ ರಕ್ಷಣೆಗೆ ಮುಂದಾಗಿದ್ದಾರೆ.
ಜೊತೆಗೆ ಯೂಟ್ಯೂಬ್ನಲ್ಲಿ ಹಾವುಗಳನ್ನು ರಕ್ಷಿಸೋದು ಹೇಗೆಂಬುದರ ಮಾಹಿತಿ ತಿಳಿದು ಈವರೆಗೆ 5 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಜೀವನೋಪಾಯಕ್ಕಾಗಿ ಫಾಸ್ಟ್‌ಫುಡ್ ಅಂಗಡಿ ಇಟ್ಟುಕೊಂಡಿರುವ ಪವನ್, ಜನವಸತಿ ಪ್ರದೇಶಗಳ ಬಳಿ ಹಾವು ಬಂದಿದೆಯೆಂದು ಕರೆ ಮಾಡಿದ್ರೆ ಸಾಕು ತಕ್ಷಣ ಸ್ಥಳಕ್ಕೆ ಹೋಗಿ ಹಾವುಗಳ ರಕ್ಷಣಾ ಕಾರ್ಯದಲ್ಲಿ ತೊಡಗುತ್ತಾರೆ.
ಜೊತೆಗೆ ಅಪಘಾತದಲ್ಲಿ ಗಾಯಗೊಂಡ ಮಂಗಗಳು, ಬಿಡಾಡಿ ದನಗಳು ಹಾಗೂ ಬೀದಿನಾಯಿಗಳನ್ನು ಮನೆಗೆ ತಂದು ಆರೈಕೆ ಮಾಡುತ್ತಾರೆ. ಇವರಿಬ್ಬರು ಇತ್ತೀಚೆಗಷ್ಟೇ ಸಕಲ-ವಿಧಿವಿಧಾನಗಳೊಂದಿಗೆ ಅಪಘಾತದಲ್ಲಿ ಮೃತಪಟ್ಟ ಮಂಗವೊಂದರ ಅಂತ್ಯಕ್ರಿಯೆ ನೆರವೇರಿಸಿದ್ದರು.
ಈ ವೇಳೆ ಮರಿಕೋತಿ ಮೃತಪಟ್ಟ ತಾಯಿಯ ಬಳಿ ಹೋಗಿ ರೋಧಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇವರಿಬ್ಬರ ಕಾರ್ಯಕ್ಕೆ ಪೋಷಕರು ಕೂಡ ಸಹಕರಿಸುತ್ತಿದ್ದಾರೆ. ಗ್ರಾಮಸ್ಥರು ಕೂಡ ಇವರ ಕಾರ್ಯಕ್ಕೆ ಸಾಥ್ ನೀಡಿದ್ದು, ಯುವಕರಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಸಿಗಬೇಕೆಂದು ಒತ್ತಾಯಿಸಿದ್ದಾರೆ.