ಬೆಳಗಾವಿ : ಇಲ್ಲಿನ ಸುವರ್ಣ ಗಾರ್ಡನ್ ಟೆಂಟ್ ಬಳಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿಗಳಾದ ರಾಜೇಂದ್ರ ಕಲಘಟಗಿ, ಸದ್ಗುರು ಭೀಮಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ, ಟಾಟಾ ಬಿರ್ಲಾ ಜೋಬಿಗೆ ಬಂತು, ಜನಗಳ ತಿನ್ನುವ ಬಾಯಿಗೆ ಬಂತು ಹಾಡನ್ನು ಹಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಸಮಸ್ತ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಪರಿವಾರ ಎಂದು ಘೋಷಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ವಂಶಸ್ಥರಿಗೆ ಮಾಸಿಕ ಗೌರವ ಧನ ನೀಡಬೇಕು ಮತ್ತು ಅವರ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯಾಭ್ಯಾಸ, ಸರ್ಕಾರಿ ನೌಕರಿಯಲ್ಲಿ ಶೇ. 5ರಷ್ಟು ಮೀಸಲಾತಿ ನೀಡಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ವಿದ್ಯುಚ್ಛಕ್ತಿ ಬಿಲ್‌ನಲ್ಲಿ ರಿಯಾಯಿತಿ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಸದ್ಗುರು ಭೀಮಪ್ಪ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತನು ಮನ ಧನದಿಂದ ಸೇವೆ ಸಲ್ಲಿಸಿದ್ದೇವೆ. ಅಲ್ಲದೇ ತ್ಯಾಗ ಬಲಿದಾನದ ಮೂಲಕ ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲೂ ನಮ್ಮ ಬೇಡಿಕೆ ಈಡೇರದೇ ಇರುವುದು ದುರ್ದೈವದ ಸಂಗತಿ ಎಂದು ಅಸಮಾಧಾನದ ಸಂಗತಿ ಎಂದರು.
ಹೋರಾಟಗಾರ ಮುರಿಗೆಪ್ಪ ಶೆಟ್ಟರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳನ್ನು ಸ್ವಾತಂತ್ರ್ಯ ಹೋರಾಟಗಾರ ಪರಿವಾರ ಎಂದು ಘೋಷಿಸಬೇಕು. ರೈಲು, ಬಸ್ ಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ನೀಡಬೇಕು. ನಿವೇಶನ ಮೀಸಲಿಡಬೇಕು. ವೈದ್ಯಕೀಯ ಸೇವೆ ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸೈನಿಕರು ಪ್ರತಿಭಟನೆ : ಇನ್ನೊಂದೆಡೆ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸೈನಿಕ ಭವನ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾಜಿ ಸೈನಿಕರು ಪ್ರತಿಭಟನೆ ನಡೆಸಿದರು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮಾಜಿ ಸೈನಿಕರಿಗೆ ಶೇ.10ರಷ್ಟು ಮೀಸಲಾತಿ ಇದ್ದರೂ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಹಾಗಾಗಿ, ಅದು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕು. ಹೆದ್ದಾರಿ ಟೋಲ್ಗಳಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಕರ್ನಾಟಕ ಸರ್ಕಾರದಲ್ಲಿ ಮಾಜಿ ಸೈನಿಕರ ಕೋಟಾದಡಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಹೈದಾರಬಾದ್ ಕರ್ನಾಟಕ ಮುಂಬಡ್ತಿ ರೀತಿಯಲ್ಲಿ ಮಾಜಿ ಸೈನಿಕರಿಗೂ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ : ಅರೆಕಾಲಿಕ ಉಪನ್ಯಾಸಕರ ಧರಣಿ: ಸೇವೆ ಕಾಯಂ, ಸೇವಾ ಭದ್ರತೆಗೆ ಒತ್ತಾಯ