ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡುವ ಪ್ರಮಾಣದಲ್ಲಿ ಕಡಿತ ಮಾಡಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಐದು ಕೆಜಿ ಅಕ್ಕಿ ಬದಲು ನಾಲ್ಕೂವರೆ ಕೆಜಿ ಅಕ್ಕಿ ವಿತರಣೆ ಮಾಡಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ, ಇಲ್ಲಿ ಪ್ರತಿ ಒಂದು ಕಾರ್ಡಿಗೆ ಅರ್ಧ ಕೆಜಿ ಅಕ್ಕಿ ಕಡಿತ ಮಾಡಿ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 5 ಜನ ಸದಸ್ಯರಿಗೆ 25 ಕೆಜಿ ಅಕ್ಕಿ ವಿತರಣೆ ಮಾಡಬೇಕು, ಆದರೆ ನ್ಯಾಯಬೆಲೆ ಅಂಗಡಿ ವಿತರಕರು ಇಪ್ಪತ್ನಾಲ್ಕೂವರೆ ಕೆಜಿ ಅಕ್ಕಿ ವಿತರಣೆ ಮಾಡುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಡ್ಡೇರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಬಾಬು ಹುಲ್ಯಾಳ ಹಾಗೂ ಬಾಳವ್ವ ಭಜಂತ್ರಿ ಮಾತನಾಡಿ ನಮಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ವಿತರಣೆ ಮಾಡುತಿದ್ದರು. ಆದರೆ ಈ ತಿಂಗಳು ಅರ್ದ ಕೆಜಿ ಅಕ್ಕಿ ಕಡಿತ ಮಾಡಿ ವಿತರಣೆ ಮಾಡುತ್ತಿದ್ದಾರೆ. ಈ ಕಡಿತ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಐದು ಕೆಜಿ ಅಕ್ಕಿ ಕೊಡಬೇಕು ಈ ಅಕ್ಕಿಯಿಂದ ನಾವು ಜೀವನ ಸಾಗಿಸುತ್ತಿದ್ದೇವೆ. ಜೊಳದ ದರದಲ್ಲಿ ಗಣನೀಯ ಏರಿಕೆಯಿಂದ ಬಡವರಿಗೆ ಹೊರೆಯಾಗಿದೆ, ಅಧಿಕಾರಿಗಳು ಕೂಡಲೇ ನಮಗೆ ಬರಬೇಕಾದ ಅಕ್ಕಿಯನ್ನು ಸರಿಯಾಗಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಆರೋಪಕ್ಕೆ ಸಂಬಂಧಿಸಿದಂತೆ ವಿತರಕರು ಪ್ರತಿಕ್ರಿಯಿಸಿ, ಮೇಲಿಂದಲೇ ಅಕ್ಕಿ ಕಡಿಮೆ ಬರುತ್ತಿದೆ, ಇದರಿಂದ ನಾವು ಗ್ರಾಮಸ್ಥರಿಗೆ ತಿಳಿ ಹೇಳಿ ಪ್ರತಿ ಕಾರ್ಡಿಗೆ ಅರ್ಧ ಕೆಜಿ ಅಕ್ಕಿ ಕಡಿತ ಮಾಡಿ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ತಹಶೀಲ್ದಾರ್ ವಾಣಿ ಯು ಅವರನ್ನು ಈಟಿವಿ ಭಾರತ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ, ’’ರೆಡ್ಡೇರಹಟ್ಟಿ ಗ್ರಾಮದಲ್ಲಿ ಅರ್ಧ ಕೆಜಿ ಅಕ್ಕಿ ಕಡಿತ ನನ್ನ ಗಮನಕ್ಕೆ ಇಲ್ಲ. ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಲಾಗುವುದು. ಇಲ್ಲಿ ಯಾರಾದರೂ ಲೋಪ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ತಹಶೀಲ್ದಾರ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ದಂಡು ಮಂಡಳಿ ಮೇಲೆ ಸಿಬಿಐ ದಾಳಿ