ಬೆಳಗಾವಿ: ನಗರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಹಿಳೆಯರು, ಮಕ್ಕಳು ಭಿಕ್ಷೆ ಬೇಡುವುದನ್ನೇ ಒಂದು ಕಾಯಕವನ್ನಾಗಿಸಿಕೊಂಡಿದ್ದಾರೆ. ಇದನ್ನರಿತ ಯುವಕರ ತಂಡವೊಂದು ನಿಜವಾಗಿಯೂ ಊಟ ಸಿಗದವರಿಗೆ ಹೊಸದೊಂದು ಐಡಿಯಾ ಮೂಲಕ ಹಸಿದವರಿಗೆ ಊಟ ನೀಡಿ ಹೊಟ್ಟೆ ತುಂಬಿಸುವ ಕೆಲಸಕ್ಕೆ ಕೈಹಾಕಿದೆ.
ಇಲ್ಲಿನ ಮಹಾಂತೇಶ ನಗರದ ನಿವಾಸಿಯಾಗಿರುವ ಆರ್.ಬಿ. ಮಾಲಿ ಎಂಬುವರು ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮದೇಯಾದ ಡಿಎಫ್ ಫೌಂಡೇಷನ್ ಮೂಲಕ 20ಕ್ಕೂ ಹೆಚ್ಚು ಜನ ಯುವಕರ ತಂಡವೊಂದನ್ನು ಜತೆಗೂಡಿಸಿಕೊಂಡು ಯಾವುದೇ ಲಾಭವಿಲ್ಲದೇ ಭಿಕ್ಷುಕರಿಗೆ ಫ್ರೀ ಫುಡ್ ಕಾರ್ಡ್ ಯೋಜನೆಗೆ ಕೈ ಹಾಕಿದ್ದಾರೆ. ಸದ್ಯ ಯುವಕರ ಕಾರ್ಯವನ್ನ ಮೆಚ್ಚಿ ಹೋಟೆಲ್ ಸಂಘದವರು ಇವರೊಂದಿಗೆ ಕೈಜೋಡಿಸಿದ್ದಾರೆ.
ಎಟಿಎಂ ಮಾದರಿ ಕಾರ್ಡ್: ಯುವಕರು ಊಟದ ಪ್ಯಾಕೇಟ್ ಅಥವಾ ಹಣ ಕೊಡುವುದಕ್ಕಿಂತ ಅವರಿಗೆ ಬೇಕಾದ ಹೋಟೆಲ್‌ನಲ್ಲಿ ಬೇಕಾದ ತಿಂಡಿಯನ್ನ ಯಾವಾಗ ಬೇಕಾದರೂ ತಿನ್ನಲಿ ಎಂಬ ಉದ್ದೇಶದಿಂದ ಡಿಎಫ್ ಫೌಂಡೇಷನ್ ತಯಾರಿಸಲಾದ 'ಡಿಯರ್ ಹುಡ್ ಫುಡ್ ಕಾರ್ಡ್' ನೀಡಲಾಗುತ್ತದೆ. ಒಂದು ಕಾರ್ಡ್ ಬೆಲೆ 10 ರೂಪಾಯಿ. ಈ ಕಾರ್ಡನ್ನು ಭಿಕ್ಷುಕರು, ವಯಸ್ಸಾದವರು, ಊಟಕ್ಕೆ ಪರದಾಡುವಂತವರಿಗೆ ನೀಡಲಾಗುತ್ತದೆ. ಹೀಗೆ ಕಾರ್ಡ್ ತೆಗೆದುಕೊಂಡವರು 'ಡಿಎಫ್ ಫುಡ್ ಕಾರ್ಡ್ ಇಲ್ಲಿ ಸ್ವೀಕರಿಸಲಾಗುತ್ತದೆ'.
ಯಾವ ಹೋಟೆಲ್‌ನಲ್ಲಿ ಬೋರ್ಡ್ ಹಾಕಿರಲಾಗುತ್ತದೆಯೋ ಅಲ್ಲಿ ಹೋಗಿ ಈ ಕಾರ್ಡ್ ಕೊಟ್ರೇ ಅವರಿಗೆ ಬೇಕಾದ ತಿಂಡಿಯನ್ನು ನೀಡಲಾಗುತ್ತದೆ. ಒಂದು ಅಥವಾ ಎರಡು ಕಾರ್ಡ್ ಕೊಟ್ರೇ ಊಟ ಕೂಡ ನೀಡಲಾಗುತ್ತದೆ. ಸದ್ಯ ಇಂತಹದ್ದೊಂದು ಹೊಸ ಬದಲಾವಣೆಯಲ್ಲಿ ಈ ಡಿಎಫ್ ಫೌಂಡೇಷನ್ನ ಯುವಕರು ಮಾಡುತ್ತಿದ್ದು ಇದರಿಂದ ನಿಜವಾಗಿಯೂ ಹಸಿದವರಿಗೆ ಕುಂದಾನಗರಿಯಲ್ಲಿ ಹೊಟ್ಟೆ ತುಂಬ ಅನ್ನ ಸಿಗುತ್ತಿದೆ. ಈಗಾಗಲೇ ನಗರದಲ್ಲಿ ಸಾವಿರಾರು ಕಾರ್ಡ್ಗಳೂ ಹಂಚಿಕೆಯಾಗಿದ್ದು, ಇದರಿಂದ ನೂರಾರು ಜನರ ಹೊಟ್ಟೆ ತುಂಬುತ್ತಿದೆ.
ಡಿಎಫ್ ಫೌಂಡೇಷನ್ ಜನವರಿ ಮೊದಲ ವಾರದಿಂದ ಈ ಕಾರ್ಡ್ ಸಿಸ್ಟಮ್ ಊಟ ವಿತರಣೆ ಮಾಡುವ ಕೆಲಸ ಆರಂಭಿಸಿದೆ. ನಗರದ ಬಹುತೇಕ ಹೋಟೆಲ್‌ಗಳೊಂದಿಗೆ ಟೈಯಪ್ ಆಗಿರುವ ಇವರು ಡಿಎಫ್ ಕಾರ್ಡ್ ತೆಗೆದುಕೊಂಡು ಬಂದರೇ ಅಂತವರಿಗೆ ಊಟ ನೀಡುವಂತೆ ಹೇಳಿದ್ದಾರೆ. ಗುರುತಿಗಾಗಿ ಹೋಟೆಲ್ ಮುಂಭಾಗದಲ್ಲಿ ತಮ್ಮದೊಂದು ಸ್ಟಿಕರ್ ಅಂಟಿಸಿರುತ್ತಾರೆ. 20 ಜನರಿರುವ ಈ ತಂಡದಲ್ಲಿ ಬಹುತೇಕ ನಗರದಲ್ಲಿನ ಯಾರೂ ಕೂಡ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದಾರೆ.
ಡಿಎಫ್ ಫೌಂಡೇಶನ್ನ ಯುವಕರೊಂದಿಗೆ ಸಾರ್ವಜನಿಕರು ಕೂಡ ಸಾಥ್ ನೀಡಬಹುದು. ಅವರು ಕೂಡ ಇಲ್ಲಿ ಫುಡ್ ಡೋನೆಟ್ ಮಾಡಬಹುದು. ಅದು ಯಾರ ಬಳಿಯೂ ಹಣ ಕೊಡದೇ ನೇರವಾಗಿ ಹೋಟೆಲ್‌ನಲ್ಲಿ ದುಡ್ಡು ಕೊಟ್ಟು ಈ 10 ರೂಪಾಯಿ ಕಾರ್ಡ್ಗಳನ್ನ ಖರೀದಿಸಿ ಆ ನಂತರ ಬೀದಿಯಲ್ಲಿರುವ ಅನಾಥರಿಗೆ ಅಥವಾ ಭಿಕ್ಷುಕರಿಗೆ ತಾವೇ ಕಾರ್ಡ್ ಕೊಡಬಹುದು. ಕಾರ್ಡ್ ಪಡೆದವರು ಹೋಟೆಲ್‌ಗಳಿಗೆ ಯಾವಾಗ ಬೇಕಾದಾಗ ಹೋಗಿ ಊಟ, ಉಪಹಾರ ಮಾಡಬಹುದು. ಇದರಿಂದ ಸಹಾಯ ಪಡೆದುಕೊಳ್ಳುತ್ತಿರುವ ಸಾಕಷ್ಟು ಭಿಕ್ಷುಕರು ಯಾರೊಬ್ಬರೂ ಕಿರಿಕ್ ಇಲ್ಲದೇ ಹೊಟ್ಟೆ ತುಂಬ ಊಟ ಮಾಡಬಹುದು.
ಡಿಎಫ್ ಫೌಂಡೇಶನ್ ಯುವಕರ ಕಾರ್ಯಕ್ಕೆ ಮೆಚ್ಚಿ ಬೆಳಗಾವಿ ಹೋಟೆಲ್ ಸಂಘದವರು ಕೂಡ ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇದೊಂದು ಒಳ್ಳೆ ಕೆಲಸ. ನಮ್ಮೆಲ್ಲ ಹೋಟೆಲ್ ಮಾಲೀಕರು ಈ ಕಾರ್ಯಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ನಗರ ಪ್ರದೇಶದಲ್ಲಿ ಭಿಕ್ಷುಕರು ಎಲ್ಲಿಯೂ ಕಾಣಬಾರದು. ಹೀಗಾಗಿ ಬೆಳಗಾವಿಯಲ್ಲಿ 450ಕ್ಕೂ ಹೆಚ್ಚಿನ ಹೋಟೆಲ್‌ಗಳಿದ್ದು, ಆ ಎಲ್ಲ ಹೋಟೆಲ್‌ಗಳಿಗೂ ಮನವಿ ಮಾಡಿಕೊಂಡು ಒಪ್ಪಿಸುವ ಕೆಲಸವನ್ನು ಮಾಡಲಾಗುವುದು. ಅನಾಥರ, ಭಿಕ್ಷುಕರ ಹಸಿವು ತಣಿಸುವ ಉದ್ದೇಶ ಇಟ್ಟುಕೊಂಡಿರುವ ಕೆಲಸಕ್ಕೆ ನಮ್ಮದು ಸಂಪೂರ್ಣ ಬೆಂಬಲ ಇದೆ. 10 ರೂಪಾಯಿ ಕಾರ್ಡ್ಗೆ 30ಕ್ಕೂ ಹೆಚ್ಚಿನ ರೂಪಾಯಿ ಊಟ ಕೊಡಲಿಕ್ಕೂ ನಾವು ತಯಾರಿದ್ದೇವೆ. ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಹೀಗಾಗಿ ಬೆಳಗಾವಿ ಜತೆಗೆ ಬೆಂಗಳೂರು, ಹೈದರಾಬಾದ್ ಸೇರಿದಂತೆ ಬೇರೆ ಬೇರೆ ಕಡೆಗಳಿಂದಲೂ ಯುವಕರಿಗೆ ಕರೆ ಬರುತ್ತಿದ್ದು, ಅಲ್ಲಿಯೂ ಈ ಕಾರ್ಡ್ ಸಿಸ್ಟಮ್ ಮಾಡಬೇಕು. ಸಹಾಯ ಮಾಡಬೇಕು ಅನ್ನುವವರು ಯಾರಿಗೂ ಹಣ ಕೊಡಬೇಡಿ. ಬದಲಿಗೆ ಕಾರ್ಡ್ ಕೊಟ್ಟು ಅವರ ಹೊಟ್ಟೆ ತುಂಬಿಸಿ ಎಂದು ಹೋಟೆಲ್ ಸಂಘದ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.
2022ರವರೆಗೆ ಮಾತ್ರ ಫ್ರೀ ಫುಡ್ ಯೋಜನೆ: ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ ಭಿಕ್ಷುಕರು, ಮಾನಸಿಕ ಅಸ್ವಸ್ಥರ ಕಾಟ ದಿನೇ ದಿನೇ ಮಿತಿ ಮೀರುತ್ತಿದೆ. ಹೀಗಾಗಿ ಸಾರ್ವಜನಿಕರು ಇದರಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಡಿಎಫ್ ಫೌಂಡೇಶನ್ ಮೂಲಕ ಫ್ರೀ ಫುಡ್ ಕಾರ್ಡ್ ನೀಡುತ್ತಿರುವ ಈ ಯುವಕರು 2022ರವರೆಗೆ ಮಾತ್ರ ನೀಡಲು ಗುರಿ ಇಟ್ಟುಕೊಂಡಿದ್ದಾರೆ. ನಂತರ ದೇಶ ಮತ್ತು ರಾಜ್ಯದಲ್ಲಿ ಭಿಕ್ಷುಕರ ಪ್ರಮಾಣ ತಾನಾಗಿಯೇ ಕಡಿಮೆ ಆಗಬೇಕು. ಅಲ್ಲಿಯವರೆಗೆ ಮಾತ್ರ ಫ್ರೀ ಫುಡ್ ವಿತರಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ಬಸ್ ನಿಲ್ದಾಣ, ದೇವಸ್ಥಾನ ಹಾಗೂ ನಗರ ಪ್ರದೇಶದಲ್ಲಿ ಸಿಗುವ ಭಿಕ್ಷುಕರು, ಅನಾಥರು ಹಾಗೂ ಮಾನಸಿಕ ಅಸ್ವಸ್ಥರನ್ನು ಆಹಾರ ಕೊಟ್ಟು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಬೇಕಿದೆ.
ಸದ್ಯ ಬೇರೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಒಂದು ರೂಪಾಯಿ ಕೊಡಲು ಕೂಡ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಆದರೆ ಸಹಾಯ ಮಾಡಲೇಬೇಕು ಅನ್ನುವವರು ಈ ರೀತಿ ಒಂದು ಹೋಟೆಲ್‌ಗೆ ಹೋಗಿ ಕಾರ್ಡ್ಗಳನ್ನು ಖರೀದಿಸಿ ನಂತರ ಭಿಕ್ಷುಕರಿಗೆ ತಾವೇ ಕಾರ್ಡ್ ನೀಡಿದರೆ ಅವರಿಗೆ ಬೇಕಾದಾಗ, ತಮಗೆ ಇಷ್ಟವಾದ ಆಹಾರವನ್ನ ತಿನ್ನುವಂತಾಗುತ್ತದೆ. ಸದ್ಯ ಯುವಕರು ಈ ಫ್ರೀ ಫುಡ್ ಕಾರ್ಡ್ ಐಡಿಯಾ ಸಾಕಷ್ಟು ಜನಮೆಚ್ಚುಗೆ ಗಳಿಸಿದ್ದು, ಎಲ್ಲಾ ಕಡೆಗಳಲ್ಲಿ ಈ ರೀತಿಯಾದರೆ ಸಹಾಯ ಮಾಡುವವರು ಕೂಡ ನಿಶ್ಚಿಂತೆಯಿಂದ ಮಾಡಬಹುದು ಅಂತಾರೆ ಸಾರ್ವಜನಿಕರು.