ಅಥಣಿ : ಭಾರತ ಲಾಕ್‌ಡೌನ್ ಹದಿನಾರನೆಯ ದಿನಕ್ಕೆ ಮುಂದುವರೆದಿದೆ. ಬಡವರು, ನಿರ್ಗತಿಕರಿಗೆ ಕೆಲ ಸಂಘ-ಸಂಸ್ಥೆಗಳು ಆಹಾರ ವಿತರಣೆ ಮಾಡುತ್ತಿವೆ. ಕೂಲಿ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅವಶ್ಯಕತೆ ಇರುವ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಶೇಂಗಾ, ಅವಲಕ್ಕಿ ಸೇರಿ ಒಂದು ತಿಂಗಳಿಗೆ ಆಗುವಷ್ಟು ದಿನ ಬಳಕೆಯ ವಸ್ತುಗಳನ್ನು ದತ್ತಾ ವಾಸ್ಟರ್ ಮತ್ತು ಕುಟುಂಬ ಸದಸ್ಯರು ವಿತರಿಸಿದರು.
ಅಥಣಿ ಪಟ್ಟಣದ ಭಾಂಡೇಗಾರ ಓಣಿ, ಗೊಂಧಳಿ ಗಲ್ಲಿ, ಮದ್ದಿನ ಮಡ್ಡಿ ಮತ್ತು ಪೌರ ಕಾರ್ಮಿಕರು ಹಾಗೂ ಅಗ್ನಿಶಾಮಕ ಇಲಾಖೆ ಹತ್ತಿರದ ಜೋಪಡಿ ನಿವಾಸಿಗಳಿಗೆ ಸೇರಿ ಐದುನೂರಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ದತ್ತಾ ವಾಸ್ಟರ್ ಯಾವುದೇ ಪ್ರಚಾರದ ಉದ್ದೇಶದಿಂದ ನಾವು ಪಡಿತರ ವಿತರಣೆ ಮಾಡುತ್ತಿಲ್ಲ, ಉಳಿದವರು ನಾನು ಕೊಡುವುದನ್ನು ನೋಡಿ ಮತ್ತಷ್ಟು ಬಡ ಜನರಿಗೆ ಸಹಾಯ ಮಾಡಲು ಮುಂದಾಗಬೇಕು. ಈಗಾಗಲೇ ಹಲವಾರು ಬಡ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದ್ದೇವೆ. ಅಷ್ಟೇ ಅಲ್ಲ, ಕನ್ನಡಿಗರು ಹೆಚ್ಚಾಗಿರುವ ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿಯೂ ಪಡಿತರ ವಿತರಣೆ ಮಾಡುವ ಯೋಚನೆ ಇದೆ ಎಂದು ಹೇಳಿದರು.