ಬೆಳಗಾವಿ: ಧಾರವಾಡ ಜಿ.ಪಂ.ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ.
ಕೋವಿಡ್ ನಿಯಮಾವಳಿಯಂತೆ ಸದ್ಯ ಹಿಂಡಲಗಾ ಜೈಲಿನ ರೆಡ್ ಜೋನ್ ಸೆಲ್ನಲ್ಲಿ ರಾತ್ರಿ ಕಳೆದಿರುವ ವಿನಯ್ ಕುಲಕರ್ಣಿ ಪ್ರತ್ಯೇಕ ಸೆಲ್ ನಲ್ಲಿದ್ದಾರೆ. ಅವರು ಇರುವ ಸೆಲ್ನಲ್ಲಿ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸಾಮಾನ್ಯ ಕೈದಿಗೆ ನೀಡಲಾಗುವ ಸೆಲ್ನಲ್ಲಿಯೇ ಇರಿಸಲಾಗಿದೆ.
ಇದರಿಂದಾಗಿ ಸೊಳ್ಳೆ ಕಾಟ ತಾಳಲಾರದೇ ಸೊಳ್ಳೆ ಬತ್ತಿಯಾದ್ರೂ ಕೊಡಿ ಎಂದು ಜೈಲು ಸಿಬ್ಬಂದಿಗೆ ಮಾಜಿ ಸಚಿವ ವಿನಯ್ ಮನವಿ ಮಾಡಿಕೊಂಡಿದ್ದಾರೆ. ನಿನ್ನೆಯಿಂದ ಊಟವೂ ಇಲ್ಲ, ರಾತ್ರಿಯಿಡೀ ನಿದ್ರೆ ಮಾಡದೇ ಯೋಚನೆಯಲ್ಲೇ ಕಳೆದಿದ್ದಾರೆ. ಸದ್ಯ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 16635 ನೀಡಲಾಗಿದೆ.
ಹಿಂಡಲಗಾ ಜೈಲಿನಲ್ಲಿ ರಾತ್ರಿ ಕಳೆದ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲು ಸೇರಿ ತೀವ್ರ ಹತಾಶರಾಗಿದ್ದಾರೆ. ರಾತ್ರಿ ಇಡೀ ನಿದ್ರೆ ಬರದ ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೆ ಎದ್ದಿದ್ದಾರೆ. ಜೈಲಿಗೆ ಬರುವ ದಿನಪತ್ರಿಕೆಗಳನ್ನು ಓದಿದ್ದಾರೆ. ಇದಾದ ನಂತರ ಜೈಲು ಸಿಬ್ಬಂದಿಗಳು ಸಾಮಾನ್ಯ ಕೈದಿಯಂತೆ ವಿನಯ್ ಕುಲಕರ್ಣಿಗೂ ಬೆಳಗ್ಗೆ ಉಪ್ಪಿಟ್ಟು ಹಾಗೂ ಟೀ ನೀಡಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ್ ಕುಲಕರ್ಣಿ ವಿಚಾರಣೆ ನಡೆಯಲಿದ್ದು, ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಪಂಚಾಕ್ಷರಿ ಎದುರು ಹಾಜರಾಗಲಿದ್ದಾರೆ. ಈಗಾಗಲೇ ಮೂರು ದಿನ ಸಿಬಿಐ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದ್ದರು. ಆದ್ರೆ ಸಿಬಿಐ ಕೋರಿಕೆಯನ್ನು ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಮಾತ್ರ ಕೋರ್ಟ್ ಆದೇಶ ನೀಡಿ ಇಂದು ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಬೇಕೆಂದು ನ್ಯಾಯಾಧೀಶರು ತಿಳಿಸಿದ್ದಾರೆ.