ಬೆಳಗಾವಿ: ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಯಡಿಯೂರಪ್ಪ, ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವು ಅಹಿತಕರವಾದ ಘಟನೆಗಳು ನಡೆಯುತ್ತಿವೆ. ಹಿಂದೂ - ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಹೇಳುವ ಪಕ್ಷ ನಮ್ಮದು. ಇದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷ ಕೂಡ ಆಗಿದೆ ಎಂದು ಹೇಳಿದರು.
ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳಾಗುತ್ತಿದ್ದು, ಇದ್ಯಾವುದಕ್ಕೂ ನಮ್ಮ ಬೆಂಬಲ ಇಲ್ಲ. ಅಂಥ ಘಟನೆಗಳನ್ನು ನಾನು ಖಂಡಿಸುತ್ತೇನೆ. ಇದೇ ರೀತಿಯ ಘಟನೆಗಳು ಮುಂದುವರೆದರೆ ಕ್ರಮ ತೆಗೆದುಕೊಳ್ಳುತ್ತೇವೆ ಹಾಗೆಯೇ ರಾಜ್ಯದಲ್ಲಿ ಗೊಂದಲ ಉಂಟು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ದೈವಗಳಿಂದಲೇ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ : ಗಡಿ ಜಿಲ್ಲೆಯಲ್ಲಿ ಸಾಮರಸ್ಯದ ಉತ್ಸವ!
ಭಿನ್ನಮತ ಸರಿಮಾಡಲು ಪ್ರಯತ್ನ: ಜಿಲ್ಲಾ ಬಿಜೆಪಿ ನಾಯಕರ ಮಧ್ಯೆ ಬಣ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಳೆಯ ಸಭೆಯಲ್ಲಿ ಸಂಘಟನೆ ಹಿತದೃಷ್ಟಿಯಿಂದ ಬಿಚ್ಚು ಮನಸ್ಸಿನಿಂದ ಚರ್ಚೆ ಮಾಡುತ್ತೇವೆ. ಸ್ಥಳೀಯ ನಾಯಕರ ಸಮಸ್ಯೆಗಳನ್ನು ಸರಿಪಡಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.