ಬೆಳಗಾವಿ: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಜಂಗಲ್ ರಾಜ್‌ನಲ್ಲಿ ಈಗ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಪೊಲೀಸರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ ಏನು ತಪ್ಪು ಮಾಡಿದ್ರು? ಸಂತ್ರಸ್ತೆ ಮನೆಗೆ ಸಾಂತ್ವನ ಹೇಳಲು ಹೋಗಿದ್ದರು. ಸಾಂತ್ವನ ಹೇಳಲು ಹೋಗಿದ್ದು ತಪ್ಪಾಯ್ತಾ? ಇದಕ್ಕೆ ಪ್ರಜಾಪ್ರಭುತ್ವ ಅಂತಾ ಕರೀಬೇಕಾ? ಅರಾಜಕತೆ ಆಗಿದೆ. ದೇಶ ಬಿಜೆಪಿ ಆಸ್ತಿಯೂ ಅಲ್ಲ, ಯೋಗಿ ಆದಿತ್ಯನಾಥ್ ಅವರ ಆಸ್ತಿಯೂ ಅಲ್ಲ. ಯೋಗಿ ಆದಿತ್ಯನಾಥ್ ಸೂಚನೆಯಂತೆ ನಿನ್ನೆ ರಾಹುಲ್ ಗಾಂಧಿಯನ್ನು ತಡೆಯಲಾಗಿದೆ. ಯೋಗಿ ಆದಿತ್ಯನಾಥ್ ಸಿಎಂ ಆಗಿ ಮುಂದುವರೆಯಲು ಅರ್ಹರಲ್ಲ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದೆ ಹೋದ್ರೆ ಅಧಿಕಾರದಲ್ಲಿ ಏಕೆ ಇರಬೇಕು. ಆತ ಯೋಗಿನೋ ರೋಗಿನೋ ನನಗಂತೂ ಗೊತ್ತಾಗುತ್ತಿಲ್ಲ. ಅಧಿಕಾರದಲ್ಲಿ ಇರಲು ಯೋಗಿ ಆದಿತ್ಯನಾಥ್ ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಈವರೆಗೆ ಸಂಪೂರ್ಣ ಪರಿಹಾರ ನೀಡಿಲ್ಲ. ವಿಧಾನಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದೆ. ಈ ವರ್ಷದ ಅತಿವೃಷ್ಟಿಯ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ನಾನು ಈ ಹಿಂದೆ ವೈದ್ಯಕೀಯ ಉಪಕರಣ ಖರೀದಿ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದೆ. 4165 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಪ್ರಸ್ತಾಪಿಸಿದ್ದೆ. 2 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದೆ. ಆಗ ಸರ್ಕಾರವೇ ಒಪ್ಪಿರಲಿಲ್ಲ. ಆದರೆ 4200 ಕೋಟಿ ಕೊರೊನಾಗೆ ಖರ್ಚು ಮಾಡಿದ್ದೇವೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳುತ್ತಿದ್ದಾರೆ. ಇದರಲ್ಲಿ 2000 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಯಡಿಯೂರಪ್ಪ ಚೆಕ್ ಮೂಲಕ ಲಂಚದ ಹಣ ಪಡೆದ್ರೆ, ಅವರ ಮೊಮ್ಮಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ. ಕೊರೊನಾ ಇರೋ ಹಿನ್ನೆಲೆ ಪ್ರತಿಭಟನೆ ಮಾಡಲು ಆಗುತ್ತಿಲ್ಲ ಎಂದರು.
ಕಟೀಲ್ ಕುಟುಕಿದ ಸಿದ್ದು: ಸಿದ್ದರಾಮಯ್ಯ ಬ್ರಿಟಿಷರಿಗಿಂತ ಕಡೆಯಾಗಿ ಅಧಿಕಾರ ಚಲಾಯಿಸಿದ್ರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ನಳಿನ್ ಕುಮಾರ್ ಕಟೀಲ್ಗೆ ಪಾಪ ಏನೂ ಗೊತ್ತಿಲ್ಲ. ಆತ ಯಕಶ್ಚಿತ್ ರಾಜಕಾರಣಿ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿರಲಿಲ್ಲ. ಅಭಿವೃದ್ಧಿ ಕೆಲಸಕ್ಕೆ ದುಡ್ಡು ಇಲ್ಲ ಅಂತ ನಾನು ಎಂದೂ ಹೇಳಿಲ್ಲ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಸಂಬಂಧ ಇಂದು ಅಭಿಪ್ರಾಯ ಸಂಗ್ರಹ ಮಾಡುತ್ತೇವೆ ಎಂದರು.