ಚಿಕ್ಕೋಡಿ (ಬೆಳಗಾವಿ) : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಎಷ್ಟೋ ಸೈನಿಕರು ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಕೆಲಸ ಗಿಟ್ಟಿಸಿರುವ ಉದಾಹರಣೆಗಳಿವೆ. ಅಲ್ಲದೆ ಹಲವರು ತಮ್ಮ ಹೊಲದಲ್ಲೋ ಅಥವಾ ಬೇರೆಡೆ ಕೆಲಸ ಮಾಡುತ್ತಾರೆ. ಆದರೆ, ಈ ಗ್ರಾಮದ ಮೂವರು ಮಾಜಿ ಯೋಧರು ತಮ್ಮ ಗ್ರಾಮದ ಮಕ್ಕಳಿಗೆ ಸೈನ್ಯಕ್ಕೆ ಸೇರಲು ಸಹಾಯವಾಗಲಿ ಎಂದು ಅವರಿಗೆ ಪ್ರತಿನಿತ್ಯ ತರಬೇತಿ ನೀಡುತ್ತಿದ್ದಾರೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಯುವಕರಿಗೆ ಸದ್ಯ ಸೇನೆಯ ಮಾದರಿಯಲ್ಲೇ ಟ್ರೈನಿಂಗ್ ನೀಡಲಾಗುತ್ತಿದೆ. ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಬಂದಿರುವ ಮಾಜಿ ಸೈನಿಕರಾದ ಮಾರುತಿ ಮಣ್ಣೀಕೇರಿ, ಭೀಮಪ್ಪ ಮಡಿವಾಳರ್ ಹಾಗೂ ಸೋಮಶೇಖರ್ ತೆಗ್ಗಿ ಎಂಬ ಯೋಧರು ಗ್ರಾಮದ 100ಕ್ಕೂ ಹೆಚ್ಚು ಯುವಕರಿಗೆ ಆರ್ಮಿ ಮಾದರಿಯಲ್ಲೇ ತರಬೇತಿ ನೀಡುತ್ತಿದ್ದಾರೆ.
ಮುಂಜಾನೆ 5 ಗಂಟೆಗೆ ಓಟದ ತರಬೇತಿ ಆರಂಭಿಸುತ್ತಾರೆ. ಲಾಂಗ್ ಜಂಪ್, ನಂತರ ವ್ಯಾಯಾಮ ಮಾಡಿಸುತ್ತಾರೆ. ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಚರ್ಚೆಗಳು ನಡೆಯುತ್ತವೆ. ಪ್ರತಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಮೂವರೂ ನಿವೃತ್ತ ಸೈನಿಕರು ಲಿಖಿತ ಪರೀಕ್ಷೆಗಳನ್ನೂ ನಡೆಸುತ್ತಾರೆ.
ಈ ಮೂಲಕ ದೇಶ ಸೇವೆಗೆ ಗ್ರಾಮದ ಒಂದಿಷ್ಟು ಯುವಕರನ್ನು ತಯಾರು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ನಿವೃತ್ತ ಯೋಧ ಭೀಮಪ್ಪ ಮಡಿವಾಳರ್, ಗ್ರಾಮೀಣ ಯುವಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಹೆಚ್ಚಿನ ಹಣ ನೀಡಿ ತರಬೇತಿ ಸಂಸ್ಥೆಗಳಿಗೆ ಹೋಗಲು ಅವರಿಗೆ ಸಾಧ್ಯವಾಗುವುದಿಲ್ಲ. ಅಂತಹ ಹಲವು ಮಂದಿ ಉದ್ಯೋಗದ ಅವಕಾಶಗಳನ್ನು ಕಂಡುಕೊಳ್ಳಲು ವಿವಿಧ ಪರೀಕ್ಷೆಗಳನ್ನು ಬರೆಯಲು ಅರ್ಜಿ ಸಲ್ಲಿಸಿರುವ ಹಲವಾರು ಗ್ರಾಮೀಣ ಮಕ್ಕಳಿಗೆ ಈ ಮಾಜಿ ಯೋಧರೆ ಆಸರೆಯಾಗಿದ್ದಾರೆ ಎಂದಿದ್ದಾರೆ.
ಅಲ್ಲದೆ ನಮ್ಮ ಗ್ರಾಮದ ಮಕ್ಕಳು ಸೈನಿಕರಾದ್ರೆ ನಮಗೂ ಕೂಡ ಹೆಮ್ಮ, ಹೀಗೆ ಪ್ರತಿ ಗ್ರಾಮದಲ್ಲೂ ಕೂಡ ನಿವೃತ ಸೈನಿಕರು ಮಕ್ಕಳಿಗೆ ತರಬೇತಿ ನೀಡಲು ಮುಂದಾಗಬೇಕು ಎಂದಿದ್ಧಾರೆ.