ಚಿಕ್ಕೋಡಿ: ನೆರೆ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಆರೋಪಿಸಿ ನೆರೆ ಸಂತ್ರಸ್ತರು ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ನಡೆದಿದೆ.
ಭಿರಡಿ ಗ್ರಾಮದಲ್ಲಿ ನೆರೆ ಪರಿಹಾರದ ಕುರಿತು ವಿಶೇಷ ಗ್ರಾಮ ಸಭೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಚೇರಿಗೆ ನುಗ್ಗಿದ ಸಂತ್ರಸ್ತರು ಪಂಚಾಯಿತಿ ಅಧಿಕಾರಿಗಳ ಸಭೆ ನಿಲ್ಲಿಸಿ, ಅಧಿಕಾರಿಗಳನ್ನು ಕಚೇರಿಯಿಂದ ಹೊರ ಹಾಕಲಾಗಿದೆ. ನಂತರ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಾ ನದಿ ಪ್ರವಾಹ ಉಂಟಾಗಿ 2 ತಿಂಗಳು ಕಳೆದರೂ ಪರಿಹಾರ ಸಿಗದೆ ಪರದಾಡುತ್ತಿರುವ ಸಂತ್ರಸ್ತರು, ಸರ್ವೇ ಅಧಿಕಾರಿಗಳಿಂದ ಪ್ರವಾಹಕ್ಕೆ ತುತ್ತಾದ ನಿಜವಾದ ಫಲಾನುಭವಿಗಳ ಕಡೆಗಣನೆಯಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.
ಸರ್ವೇ ಸಂದರ್ಭದಲ್ಲಿ ಹಣ ನೀಡಿದವರಿಗೆ ಮಾತ್ರ ನೆರೆ ಪರಿಹಾರ ನೀಡಲಾಗುತ್ತಿದೆ. ಅರ್ಧದಷ್ಟು ಬಿದ್ದ ಮನೆಗಳಿಗೆ ಪರಿಹಾರ ನೀಡಿ, ಸಂಪೂರ್ಣ ಬಿದ್ದ ಮನೆಗಳಿಗೆ ಪರಿಹಾರವೇ ಕೊಟ್ಟಿಲ್ಲ ಎಂದು ಸಂತ್ರಸ್ತರು ಅಧಿಕಾರಿಗಳ ವಿರುದ್ಧ ದೂರಿದ್ದಾರೆ.
ಸ್ಥಳಕ್ಕೆ ರಾಯಬಾಗ ತಹಶೀಲ್ದಾರ್ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೆರೆ ಸಂತ್ರಸ್ಥರು ಪಟ್ಟು ಹಿಡಿದಿದ್ದಾರೆ.