ಅಥಣಿ: ಕೃಷ್ಣಾನದಿ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ತಹಶಿಲ್ದಾರ್ ಕಚೇರಿವರೆಗೆ ಅಥಣಿ ತಾಲೂಕಿನ 24 ಗ್ರಾಮಗಳ ಸಂತ್ರಸ್ತರು ಪಾದಯಾತ್ರೆ ಮಾಡಿದರು. ಈ ಪ್ರತಿಭಟನೆಯಲ್ಲಿ ರೈತ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.
'ಬದುಕಿಸಿ ಇಲ್ಲವೇ ಮುಳುಗಿಸಿ' ಎಂಬ ಘೋಷವಾಕ್ಯದೊಂದಿಗೆ ದರೂರ ಗ್ರಾಮದಿಂದ 15 ಕಿಲೋ ಮೀಟರ್ ಪಾದಯಾತ್ರೆ ಮೂಲಕವೇ ತಾಲೂಕು ಆಡಳಿತಕ್ಕೆ ನೆರೆ ಸಂತ್ರಸ್ತರು ಮನವಿ ಸಲ್ಲಿಸಿದರು. ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಗೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪ್ರವಾಹಕ್ಕೊಳಗಾದ ಗ್ರಾಮಗಳ, ಹಾನಿಗೊಳಗಾದ ಬೆಳೆ, ಮನೆಗಳೆಲ್ಲವನ್ನು ಅಧಿಕಾರಿಗಳು ಸರ್ವೇ ನಡೆಸಿದ್ದಾರೆ. ಆದರೆ, ಈವರೆಗೂ ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಆಗಿದ್ದರೂ ಸಂತ್ರಸ್ತರ ನೋವು ಕೇಳುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.