ಬೆಳಗಾವಿ: ಸಾಮಾನ್ಯ ಬಡ ರೈತರಿಗೆ ಈವರೆಗೂ ಬೆಳೆ ಹಾನಿ ಪರಿಹಾರ ದೊರೆತಿಲ್ಲ. ಸರ್ಕಾರ ಬೆಳೆ ನಷ್ಟ ಪರಿಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಬಿಡುಗಡೆ ಮಾಡುಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ನಾಡಿನ ಬಡ ಹಾಗೂ ಸಾಮಾನ್ಯ ರೈತರಿಗೆ ಪರಿಹಾರ ಮುಟ್ಟಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿಲ್ಲ. ಇದರಿಂದಾಗಿ ಸಂಕಷ್ಟದಲ್ಲಿರುವ ಬಡ ರೈತರು ನೇಣು ಹಾಕಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಆದ್ರೆ ರೈತರ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಸಮಸ್ಯೆ ಕುರಿತು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ರೈತರಿಗೆ ಪರಿಹಾರ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆಯ ಕಚೇರಿಗೆ ಬೀಗ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸುಭಾಷ್ ದಾಯಗೊಂಡೆ, ಮಾರುತಿ ಕಡೇಮನಿ, ನಾಮದೇವ್ ದುಡುಂ, ರಾಮನಗೌಡ, ರಾಮಚಂದ್ರ ಇದ್ದರು.