ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಯಿತು ಎಂದರೆ ಸಾಕು ಪ್ರತಿಭಟನೆಗಳ ಪರ್ವ ಆರಂಭವಾಗುತ್ತದೆ. ಇನ್ನು ಪ್ರತಿಭಟನಾ ಟೆಂಟ್ಗಳ ಪಕ್ಕದ ಹೊಲಗಳಲ್ಲಿ ಜನರ ಓಡಾಟದಿಂದ ಅವರು ಬೆಳೆದಿದ್ದ ಬೆಳೆಗಳು ಹಾಳಾಗುವ ಆತಂಕ ಕಾಡುತ್ತಿದೆ.
ಹೌದು ಪ್ರತಿವರ್ಷವೂ ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಹಲಗಾ, ಬಸ್ತವಾಡ, ಕೊಂಡಸಕೊಪ್ಪ ಗ್ರಾಮಗಳ ರೈತರಿಗೆ ಈ ಗೋಳು ತಪ್ಪಿದ್ದಲ್ಲ. ಈ ಭಾರಿ ಅಧಿವೇಶನ ಹಿನ್ನೆಲೆ ಎರಡು ಕಡೆ ಪ್ರತಿಭಟನಾ ಟೆಂಟ್ ಹಾಕಲಾಗಿದ್ದು, ಒಂದು ಹಲಗಾ ಸುವರ್ಣ ಗಾರ್ಡನ್, ಮತ್ತೊಂದು ಕೊಂಡಸಕೊಪ್ಪ ಗುಡ್ಡದಲ್ಲಿ ಪ್ರತಿಭಟನಾಕಾರರಿಗೆ ವ್ಯವಸ್ಥೆ ಮಾಡಲಾಗಿದೆ. ಟೆಂಟ್ಗೆ ಭೂಮಿ ಕೊಟ್ಟಿರುವ ರೈತರಿಗೆ 1 ಗುಂಟೆಗೆ 3 ಸಾವಿರ ರೂ. ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ, ಟೆಂಟ್ ಪಕ್ಕದ ಜಮೀನುಗಳ ಬೆಳೆ ಹಾನಿಗೆ ಇನ್ನು ಪರಿಹಾರದ ಮೊತ್ತ ನಿಗದಿಪಡಿಸಿಲ್ಲ.
ಹಲಗಾ ಟೆಂಟ್ ಪಕ್ಕದ ರೈತ ಬಾಳಪ್ಪ ದೇವಪ್ಪ ಚಿಕ್ಕಪರಪ್ಪ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಜೋಳ, ಚನ್ನಂಗಿ ಬೆಳೆದಿದ್ದಾರೆ. ಈಗ ಅಧಿವೇಶನ ಶುರುವಾಗಿದ್ದರಿಂದ ಬೆಳೆ ಹಾನಿ ಭೀತಿಯಲ್ಲಿದ್ದಾರೆ. ಜಿಲ್ಲಾಡಳಿತ ಏನೋ ಬೆಳೆ ಹಾನಿಗೆ ಪರಿಹಾರ ನೀಡುವ ಭರವಸೆ ನೀಡಿದೆ. ಆದರೆ, ಅವರು ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚಿನ ಪರಿಹಾರ ನೀಡುವಂತೆ ಇಲ್ಲಿನ ರೈತರು ಒತ್ತಾಯಿಸಿದ್ದಾರೆ.
ಇನ್ನು ಧರಣಿಯಲ್ಲಿ ಭಾಗಿಯಾಗಲು ಆಗಮಿಸುವ ಜನರು ನೀರಿನ ಬಾಟಲ್, ಪ್ಲಾಸ್ಟಿಕ್ ಸೇರಿ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದರಿಂದ ಅಧಿವೇಶನ ಮುಗಿದ ಬಳಿಕ ತಮ್ಮ ಹೊಲ ಸ್ವಚ್ಛಗೊಳಿಸಲು 15 ದಿನ ಬೇಕಾಗುತ್ತದೆ. ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿದ ರೈತ ಬಾಳಪ್ಪ ಅಧಿವೇಶನದಲ್ಲಿ ಪ್ರತಿಭಟನೆಗೆ ಆಗಮಿಸುವ ಜನರು ನಮ್ಮ ಹೊಲದಲ್ಲಿ ಓಡಾಡುವುದರಿಂದ ನಾವು ಬಿತ್ತಿರುವ ಜೋಳ, ಚನ್ನಂಗಿ ಬೆಳೆ ಹಾನಿಯಾಗುತ್ತದೆ. ಕನಿಷ್ಠ 50 ಸಾವಿರ ರೂ. ಹಾಳಾಗುತ್ತದೆ. ಪರಿಹಾರ ನೀಡುತ್ತೇವೆ ಅಂತಾ ಭರವಸೆ ನೀಡಿ ಗ್ರಾಮಲೆಕ್ಕಾಧಿಕಾರಿ ಹೊಲದ ಉತಾರ ಒಯ್ದಿದ್ದಾರೆ. ಬೇಗನೆ ಪರಿಹಾರ ನೀಡಿದರೆ ಅನುಕೂಲ ಆಗುತ್ತದೆ ಎಂದರು.
ಬಳಿಕ ರೈತ ಬಾಳಪ್ಪ ಅವರ ಪತ್ನಿ ಸುಲೋಚನಾ ಚಿಕ್ಕಪರಪ್ಪ ಮಾತನಾಡಿ, ಮುಂಗಾರು ಮಳೆ ಆಗದೇ ಇದ್ದರಿಂದ ಭತ್ತ ಏನೂ ಬಂದಿಲ್ಲ. ಈಗ ಜೋಳ, ಚನ್ನಂಗಿ ಬಿತ್ತಿದ್ದೇವೆ. ಆದರೆ ಪ್ರತಿಭಟನೆಗೆ ಆಗಮಿಸುವ ಜನರು ತುಳಿದಾಡಿ ನಮ್ಮ ಬೆಳೆ ಎಲ್ಲಾ ಹಾಳಾಗುತ್ತವೆ. ಇರುವ 1 ಎಕರೆ ಹೊಲವೇ ನಮಗೆ ಜೀವನಾಧಾರ. ನಮಗಾಗುವ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಲೇಬೇಕು ಎಂದು ಒತ್ತಾಯಿಸಿದರು. ಒಟ್ಟಿನಲ್ಲಿ ಜಿಲ್ಲಾಡಳಿತ ಅಷ್ಟೋ ಇಷ್ಟು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದು ಬಿಟ್ಟು ಮೊದಲೇ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಯೋಗ್ಯ ಪರಿಹಾರ ಕೊಟ್ಟು ಇಲ್ಲಿನ ರೈತರನ್ನು ಬದುಕಿಸುವ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ: ನಾಯಕರ ಸ್ವಾಗತಕ್ಕೆ ಸಜ್ಜಾದ ಕುಂದಾನಗರಿ