ಬೆಳಗಾವಿ : ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಸಂಪೂರ್ಣ ಕಳಪೆ ಸೋಯಾಬೀನ್ ಬೀಜಗಳ ವಿತರಣೆಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ನಗರದ ಡಿಸಿ ಕಚೇರಿ ಎದುರಿಗೆ ಭಾರತೀಯ ಕೃಷಿಕ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಪ್ರತಿಭಟನಾನಿರತ ರೈತರು, ಕಳೆ ಬೀಜಗಳ ವಿತರಣೆಗೆ ಸರ್ಕಾರ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೀಗ ಸರ್ಕಾರದಿಂದ ಈವರೆಗೂ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷದಲ್ಲಿ ರೈತರಿಗೆ ಸರ್ಕಾರದ ವತಿಯಿಂದ ಪೂರೈಸಲಾಗಿರುವ ಕಳಪೆ ಗುಣಮಟ್ಟದ ಸೋಯಾಬೀನ್ ಬೀಜಗಳಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಳೆದ ಬಾರಿ ಪ್ರವಾಹದಲ್ಲಿ ರೈತರ ಬದುಕು ಬೀದಿಗೆ ಬಂದಿದೆ. ರೈತರ ಹಾನಿಗೆ ಸೂಕ್ತ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಕಳೆದ ಒಂದು ವರ್ಷದಿಂದ ಗುಣಮಟ್ಟದ ಟ್ರ್ಯಾಕ್ಟರ್‌ಗಳನ್ನು ಕಂಪನಿಗಳು ರೈತರಿಗೆ ನೀಡಿಲ್ಲ. ಹಿಂದುಜಾ ಫೈನಾನ್ಸ್‌ನಲ್ಲಿ ಟ್ರ್ಯಾಕ್ಟರ್ ಮೇಲೆ 8 ಲಕ್ಷ ರೂಪಾಯಿ ಸಾಲವಿದೆ. ನಮಗೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಅಷ್ಟೇ ಅಲ್ಲ, ಶೋ ರೂಮ್ ಮಾಲೀಕರು ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ತಕ್ಷಣ ಮಾರ್ಕೇಟ್ ಸಿಪಿಐ ನೇತೃತ್ವದಲ್ಲಿ ವಿಚಾರಣೆ ನಡೆಸಿ ಸಂಬಂಧಪಟ್ಟ ಡೀಲರ್‌ಗಳಿಂದ ಹೊಸ ಟ್ರ್ಯಾಕ್ಟರ್ ಕೊಡಿಸಬೇಕು. ಇಲ್ಲದೇ ಹೋದ್ರೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಸೂಕ್ತ ಪರಿಹಾರ ನೀಡದಿದ್ರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.