ಚಿಕ್ಕೋಡಿ : ಮಹಾರಾಷ್ಟ್ರ ನೆಲದಲ್ಲಿ ನೆಲೆಸಿರುವ ಜತ್ತ ತಾಲೂಕಿನ ಕನ್ನಡಿಗರ ಸ್ಥಿತಿ ದುಃಸ್ಥಿತಿಯಾಗಿದೆ. ಕುಡಿಯುವ ನೀರಿಗೂ ಅಲ್ಲಿನ ಜನ ಪರದಾಡುತ್ತಿದ್ದಾರೆ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಗ್ರಾಮಗಳನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಪಡಿಸುತ್ತಿಲ್ಲ ಎಂದು ಸ್ಥಳೀಯ ರೈತರು ಆರೋಪಿಸಿ ಮಹಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯದ ಬೆಳಗಾವಿ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆ, ಅಲ್ಲಿನ ಸರ್ಕಾರ ಬೇಕು ಬೇಕಂತಲೇ ಅಭಿವೃದ್ಧಿಪಡಿಸುತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗಡಿನಾಡು ಕನ್ನಡಿಗರು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಮಹಾರಾಷ್ಟ್ರ ಸರ್ಕಾರ ಗಡಿಭಾಗವನ್ನು ಅಭಿವೃದ್ಧಿಪಡಿಸದೇ ತಾರತಮ್ಯ ಮಾಡುತ್ತಿದೆ. ಈ ಭಾಗದಲ್ಲಿ ಯಾವುದೇ ಏತ ನೀರಾವರಿ ಯೋಜನೆಗಳನ್ನು ಅಥವಾ ಕೆರೆ ತುಂಬಿಸುವ ಯೋಜನೆ ಮಾಡದೇ ಇರುವುದರಿಂದ ಜತ್ತ ತಾಲೂಕಿನಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ಗುಗವಾಡ, ವಜ್ರವಾಡ, ಸಿಂಧೂರ್, ಬೀಳ್ಳೂರ್, ಉಮ್ರಾಣಿ, ಗ್ರಾಮಗಳಂತಹ ಹಲವು ಗ್ರಾಮದ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.
ಜತ್ತ ತಾಲೂಕಿನ ಗಡಿಭಾಗದ ಗಡಿನಾಡು ಕನ್ನಡಿಗರಾದ ವಿಠ್ಠಲ ಬಿರಾದಾರ ಮತ್ತು ರಾಮಣ್ಣ ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ನೀರಾವರಿ ಯೋಜನೆಗಳಿಲ್ಲ, ಅಲ್ಪಸ್ವಲ್ಪ ನೀರಿನಲ್ಲಿ ಕೆಲವು ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ, ಈ ಬರಗಾಲದಿಂದ ಬೆಳೆದ ಕಬ್ಬು ಕೂಡ ನಾಶವಾಗಿದೆ. ಮಹಾರಾಷ್ಟ್ರ ಸರ್ಕಾರ ಇದುವರೆಗೆ ನಮಗೆ ಯಾವುದೇ ನೀರಾವರಿ ಯೋಜನೆಗಳನ್ನು ಕಲ್ಪಿಸಿಲ್ಲ. ಈ ಸರ್ಕಾರ ನಮ್ಮನ್ನು ಮಣ್ಣಲ್ಲಿ ಮುಚ್ಚುವುದು ಕೊನೆಯದಾಗಿ ಬಾಕಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಕನ್ನಡಿಗರಾಗಿದ್ದರಿಂದ ಈ ಸರ್ಕಾರ ನಮ್ಮನ್ನು ತಾರತಮ್ಯದ ರೀತಿಯಲ್ಲಿ ನೋಡುತ್ತಿದೆ. ಕರ್ನಾಟಕ ಸರ್ಕಾರ ನಮ್ಮ ಪಕ್ಕದ ಹಳ್ಳಿಗಳಿಗೆ ಬಬಲೇಶ್ವರ -ತುಬುಚಿ ಏತ ನೀರಾವರಿ ಮುಖಾಂತರ ಸಮಗ್ರವಾಗಿ ನೀರಾವರಿ ಯೋಜನೆ ಮಾಡಿದೆ. ಅಲ್ಲಿನ ಜನರು ಸುಭಿಕ್ಷವಾಗಿ ಬೆಳೆಯನ್ನು ಬೆಳೆಯುತ್ತಾರೆ. ನಾವು ಕನ್ನಡಿಗರು. ನಮ್ಮ ಹಿರಿಯರ ಪರಂಪರೆಯಾಗಿ ನಾವು ಕನ್ನಡಿಗರು ಭಾಷಾವಾರು ವಿಂಗಡಣೆ ಸಮಯದಲ್ಲಿ ನಮಗೆ ಮೋಸವಾಗಿ ನಾವು ಇಲ್ಲಿ ಉಳಿದಿದ್ದೇವೆ. ಕರ್ನಾಟಕ ಸರ್ಕಾರ ಕೂಡಲೇ ನಮಗೆ ನ್ಯಾಯವನ್ನು ಕೊಡಬೇಕು. ನಮ್ಮ ಭಾಗಕ್ಕೂ ಕೂಡ ನೀರಾವರಿ ಯೋಜನೆಗಳನ್ನು ವಿಸ್ತರಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ತುರ್ತಾಗಿ ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ಆಲಿಸಬೇಕೆಂದು ಜತ್ತ ತಾಲೂಕಿನ ರೈತರು ಆಗ್ರಹಿಸಿದರು.
ಇದನ್ನೂ ಓದಿ : ಚಿಕ್ಕೋಡಿ: ಮಳೆರಾಯನ ಕೋಪಕ್ಕೆ ನಲುಗಿದ ಅನ್ನದಾತ