ಚಿಕ್ಕೋಡಿ: ಜಿಲ್ಲೆಯ ಗಡಿ ಭಾಗದಲ್ಲಿ ಬಿತ್ತನೆಗೆ ಬೇಕಾಗುವಷ್ಟು ಮಳೆಯಾಗಿದ್ದು, ರೈತರು ಮುಂಗಾರು ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಆದರೆ ಮೇವಿನ ಕೊರತೆಯಿಂದಾಗಿ ತಮ್ಮ ಎತ್ತುಗಳನ್ನು ಹಿಂದಿನ ವರ್ಷ ಮಾರಾಟ ಮಾಡಿದ್ದು, ಈ ಬಾರಿ ಬಿತ್ತನೆ ಕಾರ್ಯಕ್ಕೆ ಎತ್ತುಗಳ ಕೊರತೆ ಉಂಟಾಗಿದೆ.
ರೈತ ಮಿತ್ರ ಅಂತಲೇ ಕರೆಸಿಕೊಳ್ಳುವ ಎತ್ತುಗಳನ್ನು ರೈತ ಸಮುದಾಯ ಬಸವಣ್ಣ ಎಂದು ಪೂಜಿಸುತ್ತಾರೆ. ಹಿಂದಿನಿಂದಲೂ ರೈತರು ತಮ್ಮ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಎತ್ತುಗಳನ್ನೇ ಬಳಸಿಕೊಳ್ಳುವುದು ಪದ್ಧತಿಯಾಗಿದೆ. ಆದರೆ ಕಳೆದ ವರ್ಷ ಅತಿಯಾದ ಪ್ರವಾಹದಿಂದ ಮೇವು ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಬಹುತೇಕ ರೈತರು ಎತ್ತುಗಳ ಹೊಟ್ಟೆ ತುಂಬಿಸಲಾಗದೆ ತಮ್ಮಲ್ಲಿದ್ದ ಎತ್ತುಗಳನ್ನು ಮಾರಾಟ ಮಾಡಿ ಕೈಚೆಲ್ಲಿ ಕುಳಿತಿದ್ದಾರೆ.
ಮೇವಿನ ಕೊರತೆ ಹಾಗೂ ಯಂತ್ರಗಳ ಬಳಕೆ ಹೆಚ್ಚಾದ ಹಿನ್ನೆಲೆ ಎತ್ತುಗಳ ಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಈಗಾಗಲೇ ಬಿತ್ತನೆ ಪ್ರಾರಂಭವಾಗಿದ್ದು, ಬಿತ್ತನೆಗೆ ಎತ್ತುಗಳ ಕೊರತೆ ಎದುರಿಸುತ್ತಿರುವ ರೈತರು ಟ್ರ್ಯಾಕ್ಟರ್, ಪವರ್ ಟಿಲ್ಲರ್ಗಳನ್ನು ಉಪಯೋಗಿಸುವುದು ಅನಿವಾರ್ಯವಾಗಿದೆ.
ನಮ್ಮ ಪೂರ್ವಜರ ಕಾಲದಿಂದಲೂ ಬಿತ್ತನೆಗೆ ಎತ್ತುಗಳನ್ನು ಬಳಕೆ ಮಾಡಿಕೊಳ್ಳುವುದು ವಾಡಿಕೆ ಹಾಗೂ ಎತ್ತುಗಳಿಂದ ಬಿತ್ತನೆ ಮಾಡಿದರೆ ಫಸಲು ಚೆನ್ನಾಗಿ ಬರುತ್ತದೆ. ಆದರೆ ನಮ್ಮ ಗಡಿ ಭಾಗದಲ್ಲಿ ಎತ್ತುಗಳ ಕೊರತೆಯಿಂದಾಗಿ ನಾವು ಯಂತ್ರಗಳನ್ನು ಬಳಕೆ ಮಾಡುತ್ತಿದ್ದೇವೆ. ಆದರೆ ಯಂತ್ರಗಳಿಂದ ಬಿತ್ತನೆ ಸರಿಯಾಗಿ ಆಗುವುದಿಲ್ಲ. ಬಿತ್ತನೆ ಕಾಳುಗಳು ಯಂತ್ರದ ಮುಖಾಂತರ ಹಾಕುವುದರಿಂದ ಒಂದೇ ಸ್ಥಳದಲ್ಲಿ ಎರಡು ಕಾಳುಗಳು ಬೀಳುವುದು ಜಾಸ್ತಿ. ಇದರಿಂದ ಕೆಲವೊಂದು ಜಾಗದಲ್ಲಿ ಬಿತ್ತನೆ ಕಾಳು ಬೀಳದೆ ಇರುವುದರಿಂದ ರೈತನಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಗಡಿ ಭಾಗದ ರೈತರು.