ಬೆಳಗಾವಿ: ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿ ಮಾಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಗ್ರಾಮೀಣ ಪ್ರದೇಶದಿಂದ ಬೆಳಗಾವಿ ನಗರಕ್ಕೆ ಬರುತ್ತಿದ್ದ ರೈತರು ಬೆಳಗಾವಿ ನಗರ ಪ್ರವೇಶಿಸದಂತೆ ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ನಲ್ಲಿ ರೈತರನ್ನು ಪೊಲೀಸರು ತಡೆದರು.
ಇದೇ ವೇಳೆ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 10ಕ್ಕೂ ಅಧಿಕ ರೈತರನ್ನು ಪೊಲೀಸರ ವಶಕ್ಕೆ ಪಡೆದರು. ಇದಲ್ಲದೇ ನೇಸರಗಿ ಬಳಿಯೂ 50ಕ್ಕೂ ಅಧಿಕ ಹಾಗೂ ಯಮಕನಮರಡಿ ಬಳಿಯ 100ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೇ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಟನ್ ಕಬ್ಬಿಗೆ 5,500 ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಹೇಳಿತ್ತು. ಆದ್ರೆ, ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರಪಾಟೀಲ್ ಮನೇನಕೊಪ್ಪ ನೇತೃತ್ವದಲ್ಲಿ ರೈತರು ಮುಖಂಡರ ಸಭೆ ಜರುಗಿತು. ಆದರೆ, ಸಭೆಯಲ್ಲಿ ಸಚಿವ ಭರವಸೆ ತೃಪ್ತಿ ತರದ ಹಿನ್ನೆಲೆಯಲ್ಲಿ ಇಂದು ರೈತರು ಪ್ರತಿಭಟನೆಗೆ ಮುಂದಾಗಿದ್ದರು.
ಪೊಲೀಸ್ ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಹತ್ತರಗಿ ಟೋಲ್ ನಾಕಾ ಬಳಿ ಬೆಳಗಾವಿ ಎಸ್ಪಿ ಡಾ ಸಂಜೀವ್ ಪಾಟೀಲ ಹಾಗೂ ಸುವರ್ಣ ಸೌಧ ಮುಂಭಾಗದಲ್ಲಿ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಸಿಎಂಗೆ ಸವಾಲ್: ಈ ವೇಳೆ ಮಾತನಾಡಿದ ರೈತ ಮುಖಂಡ ಚುನ್ನಪ್ಪ ಪೂಜೇರಿ, ಕಿತ್ತೂರ ಉತ್ಸವಕ್ಕೆ ತಾಖತ್ ಇದ್ದರೆ ಬನ್ನಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸವಾಲ್ ಹಾಕಿದರು. ಕಬ್ಬಿನ ಬೆಲೆ 5,500 ನಿಗದಿ ಮಾಡದೇ ಇದ್ದರೆ ಕಿತ್ತೂರು ಉತ್ಸವಕ್ಕೆ ಬಂದು ತೋರಿಸಿ. ಸಿಎಂ ಬೊಮ್ಮಾಯಿ ಹೋದ ಕಡೆಯಲ್ಲಿ ನಮ್ಮ ರೈತರು ರಿಪೇರಿ ಮಾಡುತ್ತಾರೆ. ಕಾರ್ಖಾನೆಗಳಿಂದ 27000 ಕೋಟಿ ರೂ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಪ್ರತಿಟನ್‌ಗೆ 4,000 ರೂಗಳ ತೆರಿಗೆ ಬರುತ್ತದೆ. ಈ ತೆರಿಗೆಯಲ್ಲಿ 2000 ತೆಗೆದು ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಾಗಲಕೋಟೆ: ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ