ಅಥಣಿ : ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರ ಬೆಳೆಹಾನಿಗೆ ಪರಿಹಾರ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಥಣಿ ತಹಶೀಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ದೀಪಕ್ ಶಿಂದೇ, ಕಳೆದ ವರ್ಷ ಕೃಷ್ಣಾನದಿ ಪ್ರವಾಹದಿಂದ ಮತ್ತು ಈ ವರ್ಷ ಕೊರೊನಾ ವೈರಸ್ ಪರಿಣಾಮವಾಗಿ, ಕೃಷಿ ವಲಯಕ್ಕೆ ಪೆಟ್ಟಿನ ಮೇಲೆ ಪೆಟ್ಟು ಬಿದ್ದಿದ್ದರಿಂದ ರೈತರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಬ್ಯಾಂಕುಗಳು ಗ್ರಾಹಕರಿಗೆ ಹಣ ಕಟ್ಟುವಂತೆ ಒತ್ತಾಯ ಮಾಡುತ್ತಿವೆ ಎಂದರು.
ತಾಲೂಕಿನ ಹಲವು ಕಬ್ಬು ಕಾರ್ಖಾನೆಗಳು ಕಬ್ಬಿನ ಬಿಲ್ಲ ಬಾಕಿ ಇಟ್ಟುಕೊಂಡು ಕಬ್ಬು ಬೆಳೆಗಾರರಿಗೆ ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ. ಜಾಗತಿಕ ಮಹಾಮಾರಿ ವೈರಸ್ ಪರಿಣಾಮವಾಗಿ ವ್ಯಾಪಾರ ಮತ್ತು ವಹಿವಾಟು, ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳನ್ನ ಬೆಳೆದ ರೈತರಿಗೆ ಭಾರಿ ನಷ್ಟ ಸಂಭವಿಸಿದೆ. ಸರ್ಕಾರದಿಂದ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಅಥಣಿ ದಂಡಾಧಿಕಾರಿ ದುಂಡಪ್ಪ ಕೋಮಾರ ಅವರು, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳಿಸುತ್ತೇನೆ. ತಾಲೂಕು ಮಟ್ಟದ ಸಮಸ್ಯೆಗಳಿಗೆ ತಾಲೂಕು ಆಡಳಿತದಿಂದ ಪರಿಹಾರ ಸೂಚಿಸಿ, ಜನಸಾಮಾನ್ಯರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.