ಅಥಣಿ(ಬೆಳಗಾವಿ): ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಮುಂದಾಳತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಆನಂತರ ಅಥಣಿ ತಹಶೀಲ್ದಾರ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮುಖಾಂತರ ಸಿಎಂ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ರೈತ ಮುಖಂಡ ಮಹಾದೇವ ಮಡಿವಾಳ ಮಾತನಾಡಿ. ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತ ವಿರೋಧಿ ಹಾಗೂ ಮಾರಕ ಕಾಯ್ದೆಯಾಗಿದೆ ಇದು ವಿದೇಶಿ ಕಂಪನಿಗಳು ಮತ್ತು ಕಾರ್ಪೋರೇಟರ್ ಕಂಪನಿಗಳ ಪ್ರವೇಶಕ್ಕಾಗಿ ಜಾರಿಗೆ ತರಲಾಗಿದೆ. ಕೃಷಿಯಿಂದ ರೈತರನ್ನು ಹೊರದೂಡುವ ಕಾರ್ಯತಂತ್ರ ಈ ಕಾಯ್ದೆ ತಿದ್ದುಪಡಿಯ ಮುಖ್ಯ ಅಂಶವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಈಗಾಗಲೇ ಸುಗ್ರೀವಾಜ್ಞೆಯೊಂದಿಗೆ ಹೊರ ಬಂದಿದ್ದು, ಇದು ರೈತನಿಂದ ರೈತನ ಮಾರುಕಟ್ಟೆಯನ್ನು ಕೈ ತಪ್ಪಿಸುವಂತಹ ಉದ್ದೇಶ ಹೊಂದಿದೆ ಎಂದರು.
ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ ಯೋಜನೆಯನ್ನು ತರಲಾಗಿತ್ತು. ಆದರೆ, ಈ ಯೋಜನೆ ಇನ್ನುಮುಂದೆ ಇರುವುದಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಕೂಡ ನಿಲ್ಲುತ್ತದೆ. ರೈತರನ್ನು ಕೃಷಿಯಿಂದ ಹೊರಹಾಕಿ ದುಡಿಯುವ ಕೈ ಕಾರ್ಪೋರೇಟ್ ಕಂಪನಿಗಳ ಮುಂದೆ ಚಾಚುವಂತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದರು. ಅಲ್ಲದೇ, ಇನ್ನೊಮ್ಮೆ ಸರ್ಕಾರ ಇಂತ ಕಾಯ್ದೆಗಳ ಬಗ್ಗೆ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದೆ.