ಅಥಣಿ: ಸರ್ಕಾರ ಎಪಿಎಂಸಿಯಲ್ಲಿ ಗೋವಿನ ಜೋಳ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ತಾಲೂಕಿನ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರು ರೈತ ಸಂಘಟನೆಗಳ ಮುಖಂಡರು ನೇತೃತ್ವದಲ್ಲಿ ಸಭೆ ನಡೆಸಿದರು. ಕಬ್ಬು ಬೆಳೆಗಾರರ ಸಮಸ್ಯೆ, ಅತಿವೃಷ್ಟಿ ಪರಿಹಾರ, ಗೋವಿನಜೋಳ ಖರೀದಿ ಕೇಂದ್ರ ಹಾಗೂ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸಂಘಟನೆ ಸದಸ್ಯರು ಒತ್ತಾಯಿಸಿದರು.
ರೈತ ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ದಲ್ಲಾಳಿಗಳು ಅತಿ ಕಡಿಮೆ ಬೆಲೆಗೆ ಖರೀದಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ಸರ್ಕಾರ ತಕ್ಷಣವೇ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಮಹೇಶ್ ಕುಮಟಳ್ಳಿ ಮಾತನಾಡಿ, ರಸ್ತೆ ದುರಸ್ತಿ ಹಾಗೂ ಹಲವಾರು ಬೇಡಿಕೆಗಳು ರೈತ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಗೋವಿನಜೋಳ ಖರೀದಿ ಕೇಂದ್ರ ತೆರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಹಾಗೂ ಅತಿವೃಷ್ಟಿ ಬೆಳೆ ನಾಶಕ್ಕೆ ಕೃಷಿ ಇಲಾಖೆ ಸರ್ವೇ ಕಾರ್ಯ ನಡೆಸುತ್ತಿದೆ. ವರದಿ ಸಲ್ಲಿಸಿದ ನಂತರ ಪರಿಹಾರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.