ಬೆಳಗಾವಿ: ಲಕ್ಷಾಂತರ ರೂಪಾಯಿ ಮೌಲ್ಯದ ಆಲೂಗಡ್ಡೆ ಬೆಳೆ ಮಳೆಯಿಂದ ಕೊಳೆತ ಹಿನ್ನೆಲೆಯಲ್ಲಿ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಗೋಜಗಾ ಗ್ರಾಮದ ರೈತ ಅಶೋಕ ಬಾಮನೆ (59) ನೇಣಿಗೆ ಶರಣಾದ ರೈತ. ಮುಂಗಾರ ಮಳೆ ಚೆನ್ನಾಗಿ ಬಂದ ಪರಿಣಾಮ ರೈತ ತನ್ನ 6 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ. ಬಂಡವಾಳ ಹಾಕಿ 55 ಚೀಲ ಆಲೂಗೆಡ್ಡೆ ಖರೀದಿಸಿ ಬೆಳೆ ಬೆಳೆದ್ದ.
ಆದರೆ ಕಳೆದ ಹದಿನೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಆಲೂಗೆಡ್ಡೆ ಬೆಳೆ ಎಲ್ಲವೂ ಕೊಳೆತು ಹೋಗಿದ್ದು, ಮನನೊಂದ ರೈತ ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೈತ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ನಲ್ಲಿ 1 ಲಕ್ಷ ರೂ. ಸಾಲ ಹಾಗೂ ಆಲೂಗೆಡ್ಡೆ ಬೆಳೆಯಲು ಮಾಡಿಕೊಂಡಿದ್ದ ಲಕ್ಷಾಂತರ ರೂ.ಗಳ ಸಾಲವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.