ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘರ್ಜಿಸದ ರಾಜಾಹುಲಿ ಆಗಿದ್ದಾರೆ ಎಂದು ಮಾಜಿ ಸಂಸದ ಧ್ರುವನಾರಾಯಣ ವ್ಯಂಗ್ಯವಾಡಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಹಣ ನೀಡಲು ಕೇಂದ್ರ ಹಿಂದೇಟು ಹಾಕುತ್ತಿದೆ. ಅತಿವೃಷ್ಟಿಗೆ 38 ಸಾವಿರ ಕೋಟಿ ರೂ. ಹಾನಿಯಾದರೂ ರಾಜ್ಯಕ್ಕೆ ಕೇವಲ 1800 ಕೋಟಿ ರೂ. ಬಿಡುಗಡೆ ಆಗಿದೆ. ಈ ಅನ್ಯಾಯ ಸರಿಪಡಿಸುವಂತೆ ಕೇಳುವ ಧೈರ್ಯ ಮುಖ್ಯಮಂತ್ರಿಗೆ ಇಲ್ಲ. ಹೀಗಾಗಿ ಸಿಎಂ ಘರ್ಜಿಸದ ರಾಜಾಹುಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ಯಾರಿಗೂ ರಾಜ್ಯದ ಹಿತಾಸಕ್ತಿ ಕಾಪಾಡುವ ಧೈರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ಅನುದಾನ ಕೇಳುವ ಧೈರ್ಯ ಇಲ್ಲಿನ ಯಾವ ಸಂಸದರಿಗೂ ಇಲ್ಲ. ಮೋದಿ ಹೆಸರಲ್ಲಿ ಗೆದ್ದಿರುವ ರಾಜ್ಯದ ಫೇಸ್ಲೆಸ್ ಬಿಜೆಪಿ ಸಂಸದರುಗಳಿಗೆ ರಾಜ್ಯದ ಜನತೆ ಶೇಮ್ ಹೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಛೇಡಿಸಿದರು.
ಕೊರೊನಾ ತಡೆಗಟ್ಟಲು ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇರಳ, ದೆಹಲಿ ರಾಜ್ಯಗಳು ಒಳ್ಳೆಯ ಕ್ರಮ ಅನುಸರಿಸಿದವು. ಹೀಗಾಗಿ ಅಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ರಾಜ್ಯದ ಸಚಿವರಲ್ಲಿ ಅಸಹಕಾರ ಮನೋಭಾವನೆ ಇದೆ. ಯಾರು ಆರೋಗ್ಯ ಸಚಿವರು ಎಂಬುದು ಗೊಂದಲಮಯವಾಗಿದೆ. ಬಿ.ಶ್ರೀರಾಮುಲು ಕೇವಲ ಹೆಸರಿಗೆ ಮಾತ್ರ ಆರೋಗ್ಯ ಸಚಿವರಾಗಿದ್ದಾರೆ. ಬಿ.ಶ್ರೀರಾಮುಲು ಅವರಿಗೆ ಹೇಳಿಕೆಯನ್ನು ಸಹ ನೀಡಲು ಬಿಟ್ಟಿಲ್ಲ. ಕೇವಲ ಮತ ಸೆಳೆಯಲು ರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಅಂದ್ರು. ಬಳಿಕ ಆರೋಗ್ಯ ಸಚಿವ ಮಾಡಿ ಸುಮ್ಮನಾದರು.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಬಂತು. ಹೀಗೆ ಭಿನ್ನಾಭಿಪ್ರಾಯ ಬಂದಾಗ ಶಿಕ್ಷಣ ಸಚಿವರಿಗೆ ಹೇಳಿಕೆ ನೀಡಲು ಅವಕಾಶ ಕೊಟ್ಟರು. ಬರೀ ಹೇಳಿಕೆಗಳಿಗೆ ಸೀಮಿತವಾಗಿರುವ ಸರ್ಕಾರ ಇದು. ಯಾವುದೇ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಆಕ್ಸಿಜನ್, ವೆಂಟಿಲೇಟರ್, ಬೆಡ್ಗಳ ಕೊರತೆ ಇದೆ. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ. ಕರ್ನಾಟಕ ಸರ್ಕಾರ ಮಲಗಿದೆ. ಹೀಗಾಗಿ ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ನಾವು ಆರೋಗ್ಯ ಹಸ್ತ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರ ಮಾಡಬೇಕಾಗಿರುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಡ್ರಗ್ಸ್ ನಂಟು; ಕ್ರಮಕ್ಕೆ ಒತ್ತಾಯ :
ನಟಿಮಣಿಯರಾದ ರಾಗಿಣಿ ಹಾಗೂ ಸಂಜನಾ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. ಉಪಚುನಾವಣೆಯಲ್ಲಿ ಈ ಇಬ್ಬರು ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಡ್ರಗ್ಸ್ ನಂಟು ಹೊಂದಿರುವ ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸಿನಿಮಾ ನಟರಿರಲಿ, ರಾಜಕಾರಣಿಗಳಿರಲಿ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ನಮ್ಮ ಪಕ್ಷದ ನಿಲುವು ಇದೆ ಆಗಿದೆ ಎಂದು ಹೇಳಿದರು.