ಬೆಂಗಳೂರು/ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಗಬಾರದಿತ್ತು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಡಿ ವಿವಾದದ ಕುರಿತಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗಡಿ ವಿಚಾರವಾಗಿ ಅಮಿತ್ ಶಾ ಕರೆದ ಸಭೆಗೆ ಹೋಗಬಾರದಿತ್ತು. ಗಡಿ ವಿವಾದ ಇದೆ ಎಂದು ತೋರಿಸುವುದು ಮಹಾರಾಷ್ಟ್ರದ ಉದ್ದೇಶವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ತ್ರಿಬಲ್ ಇಂಜಿನ್ ಸರ್ಕಾರ ಇದೆ. ಗಡಿ ವಿವಾದ ನಿವಾರಣೆ ಮಾಡಬೇಕಾಗಿರುವುದು ಅವರ ಜವಾಬ್ದಾರಿ ಅಲ್ಲವೇ?. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬಾಯಿ ಮುಚ್ಚಿಕೊಂಡು ಇರಿ, ಗೂಂಡಾಗಿರಿ, ಪುಂಡಾಟಿಕೆ ಮಾಡುವುದು ಬಿಡಿ ಎಂದು ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡಬೇಕಿತ್ತು. ಸಮಿತಿ ರಚನೆ ಮಾಡಿದ್ದಾರೆ, ಅದಕ್ಕೆ ಏಕೆ ಒಪ್ಪಬೇಕೆಂದು ಎಂದು ಪ್ರಶ್ನಿಸಿದರು.
ವಿವಾದವನ್ನು ಜೀವಂತವಾಗಿ ಇಟ್ಟು ರಾಜಕೀಯವಾಗಿ ಬಳಸುವುದು ಮಹಾರಾಷ್ಟ್ರದ ಉದ್ದೇಶ. ವಿಚಾರ ನ್ಯಾಯಾಲಯದಲ್ಲಿದೆ. ಅದು ಇತ್ಯರ್ಥ ಆಗುವವರೆಗೂ ಮಾತುಕತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಬೇಕಿತ್ತು. ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಮೂರು ಜನ ಮಂತ್ರಿಗಳನ್ನು ಬೆಳಗಾವಿಗೆ ಕಳಿಸಲು ಮುಂದಾಗಿದ್ದರು. ಆದರೆ, ಅವರನ್ನು ಬರದಂತೆ ಮಾಡಿರುವುದು ಒಳ್ಳೆಯ ಕ್ರಮ ಎಂದರು.
ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರ ಜೀವಂತ: ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಮಹಾಜನ್ ಆಯೋಗ ರಚನೆ ಆಗಿತ್ತು. 1967ರ ಆಗಸ್ಟ್ನಲ್ಲಿ ಮಹಾಜನ್ ಆಯೋಗ ವರದಿ ನೀಡಿತು. ವರದಿ ನೀಡಿದ ಬಳಿಕವೂ ಮಹಾರಾಷ್ಟ್ರ ಸರ್ಕಾರ ತಿರಸ್ಕಾರ ಮಾಡಿತ್ತು. ಆದರೆ, ಈ ವರದಿಯನ್ನು ಕರ್ನಾಟಕ ಸ್ವಾಗತ ಮಾಡಿತ್ತು. ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರವನ್ನು ಜೀವಂತವಾಗಿಟ್ಟಿದ್ದಾರೆ. ಯಾವುದೇ ಗಡಿ ವಿವಾದ ಇಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಮಹರಾಷ್ಟ್ರದವರು ಕೆದಕುತ್ತಿರುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
1881ರ ಸಮೀಕ್ಷೆ ಪ್ರಕಾರ ಬೆಳಗಾವಿಯಲ್ಲಿ ಶೇ.64.39ರಷ್ಟು ಕನ್ನಡ ಮಾತನಾಡುವ ಜನರಿದ್ದಾರೆ. ಶೇ.26.04ರಷ್ಟ್ರು ಮಾತ್ರ ಮರಾಠಿ ಮಾತಾನಾಡುವ ಜನರಿದ್ದಾರೆ. ಮಹಾಜನ್ ಆಯೋಗ ಬೆಳಗಾವಿ ಸಂಪೂರ್ಣವಾಗಿ ಕರ್ನಾಟಕಕ್ಕೆ ಸೇರಬೇಕೆಂದು ಹೇಳಿದೆ. ಆದರೂ, ಕಾಲು ಕೆದಕಿ ಮಹಾರಾಷ್ಟ್ರದವರು ಜಗಳಕ್ಕೆ ಬರ್ತಿದ್ದಾರೆ. 2004 ರಲ್ಲಿ ನಾವು ಸುಪ್ರೀಂಕೋರ್ಟ್ಗೆ 1956ರ ಕಾಯ್ದೆ ಪ್ರಶ್ನಿಸಿ ಹೋಗಿದ್ದೆವು. ಹೀಗಿದ್ದರೂ ಮಹಾರಾಷ್ಟ್ರದವರು ಜಗಳ ತೆಗೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ
ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ಹಾಗೂ ಡಿಸಿಎಂ ಹೇಳಿಕೆ ನೀಡಲು ಶುರು ಮಾಡಿದರು ಎಂದು ಸಿದ್ದರಾಮಯ್ಯ ಖಂಡಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಹೆಚ್.ಕೆ.ಪಾಟೀಲ್, ಗಡಿ ವಿವಾದದ ಕುರಿತಾಗಿ ಮೂರು ಜನರ ಸಮಿತಿಯ ಅಗತ್ಯತೆ ಏನಿದೆ?. ನಮ್ಮ ಗೃಹ ಸಚಿವರು ಅಸಮರ್ಥರೇ? ಎಂದು ಪ್ರಶ್ನಿಸಿದರು.
ನಾವು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ -ಸಿಎಂ: ಈ ವೇಳೆ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಮರಾಠಿ ಮಾತನಾಡುವ ಕರ್ನಾಟಕದ ಊರುಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರದ ಸಿಎಂ ಹೇಳಿದಾಗ ನಾನು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಮಂತ್ರಿಗಳು ಬೆಳಗಾವಿಗೆ ಬರುವ ಪ್ರಯತ್ನ ಮಾಡಿದಾಗಲೂ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು.
ಅಲ್ಲಿಯ ಸಂಘಟನೆಗಳು ಗಲಾಟೆ ಮಾಡಲು ಶುರುಮಾಡಿದಾಗ ಎರಡು ಕಡೆಯಲ್ಲಿ ಉದ್ವಿಗ್ನವಾದ ವಾತಾವರಣ ಸೃಷ್ಟಿಯಾಯಿತು. ಸಭೆ ನಡೆದಿರುವುದು ಹತ್ತರಿಂದ ಹದಿನೈದು ನಿಮಿಷ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ಕೇಂದ್ರ ಗೃಹ ಸಚಿವರು ಕರೆದಾಗ ನಾವು ಹೋಗಲೇ ಬೇಕಾಗುತ್ತೆ. ಅಲ್ಲಿ ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ ಎಂದು ವಿವರಿಸಿದರು.
ವಿವಾದ ಸುಪ್ರೀಂಕೋರ್ಟ್ನಲ್ಲಿದೆ. ಅಲ್ಲಿ ಮಾತ್ರ ಪರಿಹಾರ ಸಾಧ್ಯ. ಬದಲಾಗಿ ಇದು ಬೀದಿಯಲ್ಲಿ ನಿರ್ಧಾರ ಆಗುವುದಿಲ್ಲ. ಎರಡು ಕಡೆ ಶಾಂತಿ ಕಾಪಾಡಬೇಕು. ಜನರಿಗೆ ತೊಂದರೆ ಆಗಬಾರದು ಎಂದು ಗೃಹ ಸಚಿವರು ಹೇಳಿದ್ದಾರೆ. ಗಡಿ ವಿಚಾರದ ಬಗ್ಗೆ ಅಲ್ಲಿ ಚರ್ಚೆ ಆಗಿಲ್ಲ. ಎರಡು ಕಡೆ ಸಾಮರಸ್ಯ ಮೂಡಿಸಲು ಸಮಿತಿ ರಚನೆ ಮಾಡಲು ಸಲಹೆ ಕೊಟ್ಟಿದ್ದಾರೆ. ಗಡಿ ವಿವಾದದ ಬಗ್ಗೆ ಸಭೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು: ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ