ಅಥಣಿ: ಅಪರಾಧ ತಡೆಗೆ ಪ್ರತಿಯೊಬ್ಬ ನಾಗರಿಕನೂ ಜಾಗೃತಿಗೊಳ್ಳುವುದು ಅಗತ್ಯ. ಅಪರಾಧ ಜರುಗುವುದರ ಮುಂಚೆ ನಾಗರಿಕರು ಜಾಗೃತಿ ವಹಿಸಿದರೆ ಅಪರಾಧಗಳು ಜರುಗುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದ್ದಾರೆ.
ನಗರದ ಸ್ಥಳೀಯ ಜೆ ಎ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಪರಾಧ ತಡೆ ಕುರಿತು ಉಪನ್ಯಾಸ ನೀಡಿದ ಅವರು, ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸುತ್ತಿದ್ದರೂ ನಾಗರಿಕರ ಅಸಡ್ಡೆಯಿಂದಾಗಿ ಹಲವಾರು ಪ್ರಕರಣಗಳು ಜರುಗುತ್ತಿವೆ ಎಂದರು.
ನಂತರ ಮಾತನಾಡಿದ ಅವರು, ವಿಶೇಷವಾಗಿ ಮುಂಜಾನೆ ಹಾಗೂ ಸಂಜೆ ಒಬ್ಬಂಟಿಯಾಗಿ ಮಹಿಳೆಯರು ವಾಕಿಂಗ್ ಹೋಗಬಾರದು ಹಾಗೂ ಯಾರೇ ಅಪರಿಚಿತರು ಮಾತನಾಡಿಸಿದರೂ ಅವರಿಂದ ದೂರ ಇರಬೇಕು. ಅಲ್ಲದೆ ಜನದಟ್ಟಣೆ ಇರುವ ಪ್ರದೇಶದಲ್ಲಿ ನಮ್ಮ ವಸ್ತುಗಳ ಬಗ್ಗೆ ನಮಗೆ ಜಾಗೃತಿ ಇರಬೇಕು. ಬಸ್ ಹತ್ತುವಾಗ, ರೈಲಿನಲ್ಲಿ ಸಂಚರಿಸುವಾಗ ನಮ್ಮ ನಮ್ಮ ವಸ್ತುಗಳ ಬಗ್ಗೆ ನಮಗೆ ಗಮನವಿದ್ದರೆ ಕಳ್ಳತನ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಯಾವುದೇ ಲೈಂಗಿಕ ದೌರ್ಜನ್ಯಗಳನ್ನು ಸಹಿಸಿಕೊಳ್ಳದೆ, ಭಯಪಡದೆ ನೇರವಾಗಿ ಠಾಣೆಗೆ ದೂರು ನೀಡಬೇಕು ಅಥವಾ ಸಂಬಂಧಿಸಿದ ಮಹಾವಿದ್ಯಾಲಯದ ಉಪನ್ಯಾಸಕರ ಸಹಕಾರದೊಂದಿಗೆ ಠಾಣೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.