ಬೆಳಗಾವಿ : ಕೋವಿಡ್ ಅಟ್ಟಹಾಸದ ನಡುವೆಯೇ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದೆ. ಚುನಾವಣಾ ಆಯೋಗ ಇದಕ್ಕಾಗಿ ಸಕಲ ಸಿದ್ಧತೆ ಮಾಡಿದೆ.
ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ : ನಗರದ ಆರ್.ಪಿ.ಡಿ ಕಾಲೇಜು ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಪೂರ್ಣಗೊಳ್ಳಲಿದೆ.
ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು ಕೊರೊನಾ ನೆಗೆಟಿವ್ ವರದಿ ಅಥವಾ ಎರಡು ಡೋಸ್ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಸಲ್ಲಿಸಬೇಕು. ಏಜೆಂಟರು ಕೂಡ 48 ಗಂಟೆಗಿಂತ ಹಳೆಯದಲ್ಲದ ಆರ್ಟಿ-ಪಿಸಿಆರ್ ಟೆಸ್ಟ್ ವರದಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಫಲಿತಾಂಶದ ವರದಿ ಮಾಡುವ ಪತ್ರಕರ್ತರಿಗೂ ಕೋವಿಡ್ ನೆಗಟಿವ್ ವರದಿ ಇಲ್ಲವೇ ಎರಡು ಡೋಸ್ ಲಸಿಕೆ ಪಡೆದಿರುವ ದಾಖಲೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್-19 ನಿಯಮಾವಳಿಗಳು : ಮತ ಎಣಿಕೆ ಕೇಂದ್ರಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗುವ ಮೊದಲು, ಮತ ಎಣಿಕೆಯ ವೇಳೆ ಹಾಗೂ ಚಟುವಟಿಕೆಗಳು ಮುಗಿದ ನಂತರ ಕೇಂದ್ರಗಳನ್ನು ಸಾನಿಟೈಜ್ ಮಾಡುವ ಮೂಲಕ ಸೋಂಕು ರಹಿತವಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಸೀಲ್ ಮಾಡಲಾದ ಇವಿಎಮ್ ಮತ್ತು ವಿವಿಪ್ಯಾಟ್ ಪೆಟ್ಟಿಗೆಗಳನ್ನು ಸಾನಿಟೈಜ್ ಅಥವಾ ಸೋಂಕು ರಹಿತವಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಕೊಠಡಿಗಳಲ್ಲಿ, ಕೊಠಡಿಯ ಅಳತೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಮೇಜುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಒಂದು ಕ್ಷೇತ್ರದ ಮತ ಎಣಿಕೆಗಾಗಿ 3-4 ಕೊಠಡಿಗಳ ವ್ಯವಸ್ಥೆ ಮಾಡಿ ಹೆಚ್ಚುವರಿ ಎಆರ್‌ಒ ಅಧಿಕಾರಿಗಳ ನೇಮಕ ಮಾಡಲಾಗಿದೆ. ಯಾವುದೇ ಕೊಠಡಿ, ಆವರಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈಗಳ ಶುದ್ಧತೆಗಾಗಿ ಸಾನಿಟೈಜರ್, ಸೋಪ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ.
ಕೆಮ್ಮು, ನೆಗಡಿ, ಜ್ವರ ಮುಂತಾದ ಕೋವಿಡ್-19 ರೋಗ ಲಕ್ಷಣಗಳನ್ನು ಹೊಂದಿದ ವ್ಯಕ್ತಿಗೆ ಮತ ಎಣಿಕೆ ಕೇಂದ್ರದ ಪ್ರವೇಶವನ್ನು ನಿಷೇಧಿಸಲಾಗಿದೆ. ಮತ ಎಣಿಕಾ ಕೊಠಡಿಗಳಲ್ಲಿ ಹಾಗೂ ನಿಯೋಜಿತ ಸಿಬ್ಬಂದಿ ಏಜೆಂಟ್ಗಳು ಕೋವಿಡ್ -19 ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಅಭ್ಯರ್ಥಿಗಳು ಹಾಗೂ ಏಜೆಂಟ್ಗಳಿಗೆ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಇಬ್ಬರು ಏಜೆಂಟ್ಗಳಲ್ಲಿ ಒಬ್ಬರು ಪಿಪಿಇ ಕಿಟ್ ಧರಿಸಬೇಕು ಹಾಗೂ ಎಲ್ಲ ಮತ ಎಣಿಕಾ ಸಿಬ್ಬಂದಿಗೆ ಮಾಸ್ಕ್, ಸಾನಿಟೈಜರ್, ಫೇಸ್ ಶೀಲ್ಡ್ ಮತ್ತು ಗ್ಲೌಸ್ ನೀಡಲಾಗುತ್ತದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಮತ ಎಣಿಕಾ ಕೇಂದ್ರದಗಳಿಗೆ ಪ್ರವೇಶ ಮಿತಿ : ಮತ ಎಣಿಕೆ ಕೇಂದ್ರದ ಸುತ್ತಲೂ ಗೆಲುವಿನ ಸಂಭ್ರಮಾಚರಣೆಗಳಿಗೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ ಹಾಗೂ ಕೇಂದ್ರದ ಹೊರಗಡೆ ಜನ ಗುಂಪುಗೂಡುವುದನ್ನೂ ಸಹ ನಿಷೇಧಿಸಲಾಗಿದೆ. ಗೆಲುವು ಸಾಧಿಸಿದ ಅಭ್ಯರ್ಥಿಯೊಂದಿಗೆ ನಿಲ್ಲಲು ಕೇವಲ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ.
ಕೋವಿಡ್-19 ನಿಯಮಾವಳಿಗಳನ್ನು ಪಾಲಿಸದೇ ಇದ್ದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನ್ವಯ ಸೆಕ್ಷನ್ 51 ರಿಂದ 60 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.