ಚಿಕ್ಕೋಡಿ (ಬೆಳಗಾವಿ) : ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಆನಂದ ಕಿರಶ್ಯಾಳ ಅವರು ಅಥಣಿಯಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಟ್ಟಣದಲ್ಲಿ ಆಯುರ್ವೇದ ಕಾಲೇಜು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಹಲವು ಅಧಿಕಾರಿಗಳು ಶಾಮಿಲಾಗಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ತೇರದಾಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ನಂದೀಶ ತೇರದಾಳ, ನಕಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅವರು ಭಾನುವಾರ ಅಥಣಿ ಪಟ್ಟಣ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಜೊತೆ ಮಾತನಾಡುತ್ತ, ಅಥಣಿ ಪಟ್ಟಣದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಆನಂದ ಕಿರಶ್ಯಾಳ ಅವರು ಗ್ರಾಮ ಪಂಚಾಯತ್ ಅಧಿಕಾರಿಯೊಬ್ಬರೊಂದಿಗೆ ಸೇರಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡದೆ, ಪಂಚಾಯತಿಯಲ್ಲಿ ದಾಖಲು ಮಾಡದೆ, ಕಟ್ಟಡ ಪರವಾನಿಗೆ ಪ್ರಮಾಣಪತ್ರ ಸೇರಿ ಇತರ ಪ್ರಮಾಣ ಪತ್ರಗಳನ್ನು ಸಕಲಿಯಾಗಿ ಸೃಷ್ಟಿಸಿ, ಸರ್ಕಾರಕ್ಕೆ ಮೋಸ ಮಾಡಿ, ತೆರಿಗೆ ವಂಚಿಸಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾಲೇಜು ನಿರ್ಮಾಣ ಮಾಡಿದ್ದಾರೆ.
ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಆಯುರ್ವೇದ ಕಾಲೇಜನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಕಾಲೇಜಿಗೆ ಬೇಕಾದ ಪರವಾನಿಗೆಯನ್ನು ಪಡೆಯಲು ಆನಂದ ಕಿರಶ್ಯಾಳ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ. ಸಂಸ್ಥೆಯ ಹೆಸರಿನಲ್ಲಿ ಆಸ್ತಿ ದಾಖಲಾತಿಯಿಲ್ಲ. ಪ್ಲ್ಯಾನಿಂಗ್, ನಮೂನೆ 09 ಕೂಡ ಪಡೆಯದೇ ಕಾಲೇಜು ಪ್ರಾರಂಭ ಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಆನಂದ ಕಿರಶ್ಯಾಳ ಅವರು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರನ್ನು ಕೂಡಲೇ ಆ ಸದಸ್ಯತ್ವದಿಂದ ತೆಗೆದುಹಾಕಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇನೆ ಮತ್ತು ಕಾನೂನು ಬಾಹಿರವಾಗಿ 05 ವರ್ಷ ಆಸ್ಪತ್ರೆಯ ಉದ್ದಿಮೆ ಪರವಾನಿಗೆ ಪ್ರಮಾಣಪತ್ರ ಪಡೆದಿದ್ದಾರೆ. ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಯಾವುದೇ ಕಂದಾಯವನ್ನು ಸಂದಾಯ ಮಾಡದೆ ಸರ್ಕಾರದ ಬೊಕ್ಕಸಕ್ಕೆ ಸಂಸ್ಥೆಯವರು ಹಾಗೂ ಇತರೆ ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ನಷ್ಟವನ್ನು ಉಂಟುಮಾಡಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿ. ಪಂ ಸಿಇಓ ಅವರು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಆನಂದ ಕಿರಶ್ಯಾಳ ದೂರವಾಣಿ ಮುಖಾಂತರ ಈಟಿವಿ ಭಾರತ ಜೊತೆ ಮಾತನಾಡಿ, ಸದ್ಯ ಆರೋಪವನ್ನು ನಾವು ತಳ್ಳಿ ಹಾಕುತ್ತೇವೆ. ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡೋಕೆ ಹೋಗೋದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಮುಗಿದ ಮೇಲೆ ನಾನು ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಬೈಕ್ಗಳ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ವರ್ಗಾವಣೆ : ನಾಲ್ಕು ಜನ ಆರ್ಟಿಒ ಸಿಬ್ಬಂದಿ ಬಂಧನ